ಕಲಿಕಾಸಕ್ತಿ ಹೆಚ್ಚಿಸಲಿದೆ ಬಯಲು ವಾಚನಾಲಯ

snd school
ಸಿಂಧನೂರು ತಾಲೂಕು ದುಗ್ಗಮ್ಮನಗುಂಡ ಗ್ರಾಮದ ಸರ್ಕಾರಿ ಕಿಪ್ರಾ ಶಾಲೆಯಲ್ಲಿ ಡಾ.ಅಂಬೇಡ್ಕರ್ ಬಯಲು ವಾಚನಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ್, ದೇವರಗುಡಿ ಗ್ರಾಪಂ ಪಿಡಿಒ ಸುಜಾತಾ, ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ, ಉಪಾಧ್ಯಕ್ಷೆ ರೇಣಮ್ಮ, ಮಾಜಿ ಅಧ್ಯಕ್ಷ ಲಕ್ಷ್ಮಣ, ಗ್ರಾಪಂ ಸದಸ್ಯ ಪಂಪನಗೌಡ ಇತರರಿದ್ದರು.
Published on

ಸಿಂಧನೂರು: ಬಯಲು ವಾಚನಾಲಯಗಳು ಮಕ್ಕಳ ಕಲಿಕೆಗೆ ಸ್ಫೂರ್ತಿ ನೀಡುತ್ತವೆ ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ್ ಹೇಳಿದರು.

ತಾಲೂಕಿನ ದುಗ್ಗಮ್ಮನಗುಂಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ .ಅಂಬೇಡ್ಕರ್ ಬಯಲು ವಾಚನಾಲಯವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಮುಖ್ಯಶಿಕ್ಷಕ ಶಂಕರ ದೇವರು ಹಿರೇಮಠ ಅವರು ದುಡಿಮೆಯ ಹಣದಲ್ಲಿ 34 ಸಾವಿರ ರೂ. ವೆಚ್ಚ ಮಾಡಿ ಶಾಲಾ ವಾಚನಾಲಯ ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾರೆ. ಕನ್ನಡ, ಇಂಗ್ಲಿಷ್ ಹಾಗೂ ಗಣಿತ ವಿಷಯಗಳಿಗೆ ಸಂಬಂಧಿಸಿದ ಪ್ರತಿ ವಿಷಯದ ವಿಭಾಗದ ಅಕ್ಷರಗಳನ್ನು ಬೇರೆ ಬೇರೆ ಬಣ್ಣಗಳಿಂದ ಬರೆಯಲಾಗಿದೆ. ಇದು ಮಕ್ಕಳ ಕಲಿಕೆಯ ಆಸಕ್ತಿ ಹೆಚ್ಚಿಸಲು ಸಾಧ್ಯವಾಗುವಂತಹ ಭಾಷಾ ಆಟಗಳನ್ನು ಬಯಲು ವಾಚನಾಲಯ ಹೊಂದಿದೆ ಎಂದರು.

ದೇವರಗುಡಿ ಗ್ರಾಪಂ ಪಿಡಿಒ ಸುಜಾತಾ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂಥ ವಾಚನಾಲಯಗಳು ನಿರ್ಮಾಣವಾಗಬೇಕು. ಅದರಿಂದ ಮಕ್ಕಳ ಕಲಿಕೆಯಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ವನಸಿರಿ ಫೌಂಡೇಷನ್‌ನಿಂದ ಪಕ್ಷಿಗಳಿಗೆ ಕುಡಿವ ನೀರಿನ ಅರವಟಿಗೆ ಅಳವಡಿಸಲಾಯಿತು. ಮುಖ್ಯಶಿಕ್ಷಕ ಶಂಕರ ದೇವರು ಹಿರೇಮಠ, ರಾಜ್ಯಪಾಲ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿರಿಗನ್ನಡ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ, ಉಪಾಧ್ಯಕ್ಷೆ ರೇಣಮ್ಮ, ಮಾಜಿ ಅಧ್ಯಕ್ಷ ಲಕ್ಷ್ಮಣ, ಗ್ರಾಪಂ ಸದಸ್ಯರಾದ ಪಂಪನಗೌಡ, ಮಾಜಿ ಸದಸ್ಯ ದುಗ್ಗಪ್ಪ, ಮುಖ್ಯ ಅಡುಗೆದಾರೆ ರೇಣುಕಾ, ಸಹಾಯಕಿ ಹನುಮಮ್ಮ, ದೇವರಗುಡಿ ಶಾಲೆ ಮುಖ್ಯಶಿಕ್ಷಕ ಜಗದೀಶ ನಂದಿ, ಸಮೂಹ ಸಂಪನ್ಮೂಲ ವ್ಯಕ್ತಿ ಷಣ್ಮುಖ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net