

ಚಾಮರಾಜನಗರ: ಪ್ರತಿ ದೇವಸ್ಥಾನಕ್ಕೂ ಅದರದ್ದೇ ಆದ ಕ್ಷೇತ್ರ ಮಹಿಮೆ, ನಂಬಿಕೆ, ಸಂಪ್ರದಾಯ ಇರುತ್ತದೆ. ಭಕ್ತರು ಕೂಡ ಅದಕ್ಕನುಗುಣವಾಗಿಯೇ ನಡೆದುಕೊಳ್ಳುತ್ತ ಆಚರಣೆಗಳನ್ನು ಪಾಲಿಸುತ್ತಿರುತ್ತಾರೆ. ಅಂಥ ಒಂದು ಕ್ಷೇತ್ರಗಳಲ್ಲಿ ಚಾಮರಾಜನಗರ ಗಡಿಭಾಗದ ತಳವಾಡಿಯ ಕೊಂಗಹಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವೂ ಒಂದು.
ಈ ದೇವಸ್ಥಾನದಲ್ಲೊಂದು ವಿಶೇಷವಾದ ನಂಬಿಕೆ ಇದೆ. ಕೊಂಗಹಳ್ಳಿ ಮಾದಪ್ಪನ ಸನ್ನಿಧಿ ಎಂತಲೂ ಕರೆಸಿಕೊಳ್ಳುತ್ತಿರುವ ಈ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ. ಮಹಿಳೆಯರಿಗೆ ಪ್ರವೇಶ ನಿಷೇಧ ಇರುವ ರಾಜ್ಯದ ಏಕೈಕ ದೇವಸ್ಥಾನವಿದು ಎನ್ನಲಾಗುತ್ತಿದೆ. ಮಹಿಳೆಯರು ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಕಲ್ಲಾಗುತ್ತಾರೆಂಬ ನಂಬಿಕೆ ಇರುವುದರಿಂದ ಇಲ್ಲಿ ಇಂಥದ್ದೊಂದು ನಿಷೇಧ ಪಾಲಿಸಲಾಗುತ್ತಿದೆ.
ಆದರೆ ಇನ್ನು ಬರೋಬ್ಬರಿ 58 ದಿನಗಳ ಕಾಲ ಮಹಿಳೆಯರಿಗೆ ಮಾತ್ರವಲ್ಲ, ಯಾವ ಭಕ್ತರಿಗೂ ಈ ದೇವಸ್ಥಾನಕ್ಕೆ ಪ್ರವೇಶ ಇರುವುದಿಲ್ಲ. ನ. 15ರಿಂದ 2021ರ ಜ.12ರ ವರೆಗೂ ಈ ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಲಾಗಿದೆ. 'ಪ್ರತಿ ದೀಪಾವಳಿ ಜಾತ್ರೆಗೆ ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ಅಲ್ಲದೆ ಪ್ರತಿ ಕಾರ್ತಿಕ ಸೋಮವಾರದಂದು ವಿಶೇಷ ಪೂಜೆಗಳು ನಡೆಯುತ್ತಿರುತ್ತವೆ. ಆದರೆ ಈ ಸಲ ಕರೊನಾ ಹಾವಳಿ ಇರುವುದರಿಂದ ಸಹಸ್ರಾರು ಜನರು ಒಂದೇ ಜಾಗದಲ್ಲಿ ಸೇರಿದರೆ ದೈಹಿಕ ಅಂತರ ಕಾಪಾಡುವುದು ಕಷ್ಟ. ಅಲ್ಲದೆ ಸೋಂಕು ವ್ಯಾಪಿಸುವ ಸಾಧ್ಯತೆಯೂ ಇರುತ್ತದೆ ಎಂಬ ಹಿನ್ನೆಲೆಯಲ್ಲಿ ಎಲ್ಲ ಭಕ್ತರಿಗೂ ಆಡಳಿತ ಮಂಡಳಿ 58 ದಿನಗಳ ಕಾಲ ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಿದೆ' ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ.ಭರಣಿಧರನ್ ತಿಳಿಸಿದ್ದಾರೆ.