ಬಿಜೆಪಿ ಅಧಿಕಾರಕ್ಕೆ ತರುವುದಷ್ಟೇ ಗುರಿ, ವಿಜಯೇಂದ್ರ ಟಾರ್ಗೆಟ್ ಅಲ್ಲ

Road Development, Grants, Vijayapura, Mallikarjuna Ashram, Jnana Yoga Ashram, Siddharudh Math, Basanagowda Patil Yatnala,
ಬಸನಗೌಡ ಪಾಟೀಲ ಯತ್ನಾಳ
Published on

ಹುಬ್ಬಳ್ಳಿ : ನಮ್ಮ ಟಾರ್ಗೆಟ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಲ್ಲ. ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು, ಭ್ರಷ್ಟಾಚಾರ ರಹಿತ ರಾಜಕಾರಣಿ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಗುರಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂಡದ ದೆಹಲಿ ಭೇಟಿ ಯಶಸ್ವಿಯಾಗಿದೆ. ಬಿಜೆಪಿ ಹೈಕಮಾಂಡ್ ಮೌನ ತಾಳುವಂತೆ ಸೂಚಿಸಿರುವುದು ನಿಜ. ಇನ್ನೇನಿದ್ದರೂ ಕುಟುಂಬ ರಾಜಕಾರಣ ಹಾಗೂ ಭ್ರಷ್ಟರ ಬಗ್ಗೆ ಹೈಕಮಾಂಡ್​ಗೆ ಪತ್ರ ಬರೆಯುತ್ತೇನೆ ಎಂದರು.

ದೆಹಲಿಯಿಂದ ಹಸನ್ಮುಖನಾಗಿಯೇ ಬಂದಿದ್ದೇನೆ. ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಸದಾ ಪ್ರೀತಿ ತೋರುತ್ತದೆ. ನಾನು ಕುಟುಂಬ ರಾಜಕಾರಣ ಮಾಡಿಲ್ಲ. ನನ್ನ ಮಗನಿಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವವೂ ಇಲ್ಲ. ನ್ಯಾಯಾಲಯದ ಪ್ರಕರಣವೊಂದರ ಹಿನ್ನೆಲೆಯಲ್ಲಿ ಆತ ನನ್ನೊಂದಿಗೆ ದೆಹಲಿಗೆ ಬಂದಿದ್ದ. ಪಕ್ಷಕ್ಕೂ, ಆತನ ದೆಹಲಿ ಭೇಟಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ಅಧಿವೇಶನದ ಮೊದಲ ದಿನವೇ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ರ್ಚಚಿಸುವಂತೆ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ವಕ್ಪ್, ಪಂಚಮಸಾಲಿ ಮೀಸಲಾತಿ, ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವುದರ ಬಗ್ಗೆ ಚರ್ಚೆ ಆಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 1.50 ಲಕ್ಷಕ್ಕೂ ಹೆಚ್ಚು ರೈತರ ಜಮೀನು, ಮಠ, ಮಂದಿರಗಳ ಪಹಣಿಯಲ್ಲಿ ವಕ್ಪ್ ಹೆಸರು ಕೂರಿಸಲಾಗಿದೆ. ಇದೆಲ್ಲದರ ಎರಡೂವರೆ ಸಾವಿರ ಪುಟಗಳ ದಾಖಲೆಗಳನ್ನು ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರಿಗೆ ನೀಡಿದ್ದೇನೆ. ವಕ್ಪ್ ಕಾನೂನು ಸಂಪೂರ್ಣ ರದ್ದುಗೊಳಿಸಬೇಕು. ಮುಂದಿನ ಬಜೆಟ್ ಅಧಿವೇಶನದಲ್ಲಿ ವಕ್ಪ್ ಬಗ್ಗೆ ರ್ಚಚಿಸುವುದಾಗಿ ಕೇಂದ್ರ ಸಚಿವರು ಹಾಗೂ ಬಿಜೆಪಿ ಹೈಕಮಾಂಡ್ ಭರವಸೆ ನೀಡಿದ್ದಾರೆ ಎಂದರು.

ವಿಶ್ವಗುರು ಬಸವೇಶ್ವರರ ಕುರಿತು ನಾನು ನೀಡಿದ ಹೇಳಿಕೆಯಿಂದ ಆಕ್ರೋಶ ವ್ಯಕ್ತಪಡಿಸುತ್ತಿರುವವರು ಬಸವಣ್ಣನವರ ನಿಜವಾದ ಭಕ್ತರು ಅಲ್ಲ ಎಂದ ಬಸನಗೌಡ ಪಾಟೀಲ ಯತ್ನಾಳ, ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯಲ್ಲಿ ಒಂದಾದರೂ ಬಸವ ಭವನ ಕಟ್ಟಿಸಿದ್ದಾರೆಯೇ? ಒಂದಾದರೂ ವೈದ್ಯಕೀಯ ಕಾಲೇಜಿಗೆ ಬಸವಣ್ಣನವರ ಹೆಸರು ಇಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

ಶಾಮನೂರು ಶಿವಶಂಕರಪ್ಪ ಅವರಿಗೆ ಬಸವಣ್ಣನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನನ್ನನ್ನು ಚುನಾವಣೆಯಲ್ಲಿ ಸೋಲಿಸುವುದಾಗಿ ಹೇಳಿರುವವರು ಬಸವಣ್ಣನವರ ಅಭಿಮಾನಿ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದುಗಳ ಭಾವನೆ, ನೋವು ಅರ್ಥವಾಗುವುದಿಲ್ಲ. ಅವರಿಗೆ ಮುಸ್ಲಿಂರಷ್ಟೇ ಬೇಕು ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net