

ಹರಪನಹಳ್ಳಿ: ದರ ಕುಸಿತದಿಂದ ತಾಲೂಕಿನ ವಿವಿಧ ಗ್ರಾಮಗಳ ರೈತರು ಈರುಳ್ಳಿ ಬೆಳೆ ಕಟಾವಿಗೆ ಹಿಂದೇಟು ಹಾಕುತ್ತಿದ್ದು, ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ತಾಲೂಕಿನ 1,800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಆಗಿದೆ. ಚಿಗಟೇರಿ ಹೋಬಳಿಯ ವ್ಯಾಪ್ತಿಗೆ ಬರುವ ಮೈದೂರು, ಬಳಿಗನೂರು, ಬೆಣ್ಣಿಹಳ್ಳಿಗಳಲ್ಲಿಯೇ 1,300 ರಿಂದ 1,500 ಹೆಕ್ಟೇರ್ ಪ್ರದೇಶ ಹಾಗೂ ಉಳಿದಂತೆ ಕಸಬಾ ಹೋಬಳಿಯ ಬಾಗಳಿ ಮತ್ತು ನಂದಿಬೇವೂರು ಭಾಗಗಳಲ್ಲಿ 200ರಿಂದ 300 ಹೆಕ್ಟೇರ್‌ನಲ್ಲಿ ಸೇರಿದಂತೆ ವಿವಿಧೆಡೆ ಈರುಳ್ಳಿ ಬೆಳೆದಿದ್ದಾರೆ.
ಪ್ರತಿ ವರ್ಷ ಅತೀವೃಷ್ಟಿ ಅಥವಾ ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳಿಂದ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಪ್ರಸಕ್ತ ವರ್ಷ ವಾಡಿಕೆಗೂ ಅಧಿಕ ಮಳೆ ಸುರಿದ ಪರಿಣಾಮ ಸುಳಿ ರೋಗ ತಗುಲಿ ಸಾಕಷ್ಟು ಪ್ರಮಾಣದ ಈರುಳ್ಳಿ ಬೆಳೆ ಹಾನಿಯಾಗಿದೆ. ಅಳಿದುಳಿದ ಈರುಳ್ಳಿ ಕಿತ್ತು ಮಾರಾಟ ಮಾಡಲು ರೈತರು ಯೋಚಿಸಿದರೂ ಅದಕ್ಕೆ ತಕ್ಕನಾದ ಯೋಗ್ಯ ಬೆಲೆ ಇಲ್ಲ ಎನ್ನುತ್ತಾರೆ ಚಿಗಟೇರಿ ಗ್ರಾಮದ ಎಂ. ಕರೇಗೌಡ, ಎಂ. ಚಂದ್ರಗೌಡ, ಬಾಗಳಿ ಗ್ರಾಮದ ಪತ್ರಿಗೌಡರು.
ಸರ್ಕಾರವು ಈರುಳ್ಳಿ ಬೆಳೆಗಾರರ ನೆರವಿಗೆ ಮುಂದಾಗಬೇಕಿದೆ. ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕಿದೆ. ಬೆಂಗಳೂರಿಗೆ ತೆರಳಿ ಈರುಳ್ಳಿ ಮಾರಾಟ ಮಾಡುವ ರೈತರಿಗೆ ಸಮೀಪದಲ್ಲಿಯೇ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ರೈತರಿಗೆ ಬೆಂಬಲವಾಗಿ ನಿಲ್ಲಬೇಕು ಎನ್ನುತ್ತಾರೆ ರೈತ ಮುಖಂಡರು.