ಕಣ್ಣೀರು ತರಿಸಿದ ಈರುಳ್ಳಿ..!

gls 22-1a
ಗೊಳಸಂಗಿ ವ್ಯಾಪ್ತಿಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಸಿಕ್ಕು ರೈತರು ಬೆಳೆದ ಈರುಳ್ಳಿ ಕೊಳೆತದ್ದರಿಂದ ತಿಪ್ಪೆಗೆ ಸುರಿದಿರುವುದು.
Published on

ಡಿ.ಬಿ. ಕುಪ್ಪಸ್ತ ಗೊಳಸಂಗಿ

ಅಖಂಡ ಬಸವನ ಬಾಗೇವಾಡಿ ತಾಲೂಕಿನ ರೈತರು ಈರುಳ್ಳಿ ಬೆಳೆಯನ್ನೇ ನಂಬಿ ವರ್ಷವಿಡೀ ದುಡಿಯುತ್ತ ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಅಖಂಡ ಬಸವನಬಾಗೇವಾಡಿ ತಾಲೂಕಿನ ಕೃಷಿಕರು ತಮ್ಮ ಖುಷಿಯನ್ನೇ ಕಳೆದುಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ಮೊದಲೇ ಈರುಳ್ಳಿ ಬೆಲೆ ಪ್ರತಿ ಕ್ವಿಂಟಾಲ್‌ಗೆ 2,000 ರೂ. ಗಳಿಂದ 900 ರೂ. ಗಳವರೆಗೂ ಪಾತಾಳಕ್ಕೆ ಕುಸಿದಿದೆ. ಇಂಥದ್ದರಲ್ಲಿ ಅಕಾಲಿಕ ಆಲಿಕಲ್ಲು ಮಳೆ ಸುರಿದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ನಿಡಗುಂದಿ ತಾಲೂಕಿನಲ್ಲಿ 44.25 ಎಕರೆ, ಬಸವನ ಬಾಗೇವಾಡಿ ತಾಲೂಕಿನಲ್ಲಿ 5 ಎಕರೆ, ಕೊಲ್ಹಾರ ತಾಲೂಕಿನಲ್ಲಿ 3 ಎಕರೆ ಸೇರಿ ಒಟ್ಟು 50 ಎಕರೆಗೂ ಅಧಿಕ ಪ್ರಮಾಣದ ಈರುಳ್ಳಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಲಕ್ಷಾಂತರ ರೂ., ಸಾಲಸೋಲ ಮಾಡಿ ಈರುಳ್ಳಿ ಬೆಳೆ ಹಾನಿಯಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಿ ಅನ್ನದಾತರ ಕಂಬನಿ ಒರೆಸುವ ಕಾರ್ಯ ಮಾಡಬೇಕಿದೆ.

ಒಬ್ಬ ಸಾಮಾನ್ಯ ರೈತ ಒಂದು ಎಕರೆ ಈರುಳ್ಳಿ ಬೆಳೆಯಲು ಲಾವಣಿ, ಭೂಮಿ ಹದಗೊಳಿಸಲು, ಬೀಜ-ಗೊಬ್ಬರ ಖರೀದಿ, ಕಸ ಕೀಳಲು, ಮೇಲುಸ್ತುವಾರಿ ಮಾಡಲು ಕನಿಷ್ಠ 60-70 ಸಾವಿರ ರೂ., ಖರ್ಚಾಗುತ್ತದೆ. ಆದರೆ, ಇಂದು ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 800 ರೂ., ನಿಂದ 1000 ರೂ., ತಲುಪಿದೆ. ಹೀಗಾದರೆ ಕೃಷಿಕರಿಗೆ ಖುಷಿ ಎಲ್ಲಿಂದ ಬರಬೇಕು?

ಕೃಷ್ಣಾಜಿ ವಿ. ಕುಲಕರ್ಣಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಮಸೂತಿ ಗ್ರಾಮ.

ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಅಖಂಡ ಬಸವನ ಬಾಗೇವಾಡಿ ತಾಲೂಕಿನಲ್ಲಿ 20.29 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದ ಈರುಳ್ಳಿ ಬೆಳೆ ಹಾನಿಯಾಗಿದೆ. ಈ ಕುರಿತು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

ರಾಘವೇಂದ್ರ ಬಗಲಿ, ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಬಸವನ ಬಾಗೇವಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net