

ತಿ.ನರಸೀಪುರ: ಸರ್ವಜ್ಞನ ತ್ರಿಪದಿಗಳು ಜ್ಞಾನದ ಭಂಡಾರವಾಗಿದೆ. ಕೇವಲ ಮೂರು ಸಾಲುಗಳ ತ್ರಿಪದಿಗಳಲ್ಲಿ ಸಮಾಜದ ಅಂಕುಡೊಂಕುಗಳನ್ನು ನಿರ್ಭೀತಿಯಿಂದ ಪ್ರಸ್ತುತಪಡಿಸಲಾಗಿದ್ದು, ಇದರಿಂದ ಸಮಾಜದಲ್ಲಿನ ಸರಿ ತಪ್ಪುಗಳ ಬಗ್ಗೆ ತಿಳಿವಳಿಕೆ ಮೂಡುತ್ತದೆ ಎಂದು ಕಸಾಪ ತಾಲೂಕು ಮಾಜಿ ಅಧ್ಯಕ್ಷ ಕೆ.ಆರ್.ಷಣ್ಮುಖಸ್ವಾಮಿ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘದ ಆಶ್ರಯದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 504ನೇ ವರ್ಷದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಬಡವರು-ದುರ್ಬಲರ ನೋವಿಗೆ ಸ್ಪಂದಿಸುವ ಧ್ವನಿಯಾಗಿದ್ದ ಸರ್ವಜ್ಞ ದಿಟ್ಟ ನಿಲುವಿನ ಪ್ರಬುದ್ಧ ವ್ಯಕ್ತಿಯಾಗಿದ್ದರು. ಕಬೀರ, ನಾರಾಯಣಗುರು, ತಿರುವಾಳ್ವಾರ್ ಮಾದರಿಯಲ್ಲಿ ತ್ರಿಪದಿಗಳ ಮೂಲಕ ತಮ್ಮ ತತ್ವ ವಿಚಾರಗಳನ್ನು ಬೋಧಿಸಿದ ಸರ್ವಜ್ಞನಿಗೂ ಬುದ್ಧ, ಬಸವ, ಅಂಬೇಡ್ಕರ್‌ಗೆ ಸಿಕ್ಕಂತಹ ಮನ್ನಣೆಗಳು ದೊರಕಬೇಕಾಗಿದೆ ಎಂದರು.
ಸರ್ವಜ್ಞರು ವಚನಗಳ ಮೂಲಕ ಸಾರಿದ ತತ್ವ, ಸಿದ್ಧಾಂತಗಳು ಪ್ರಸಕ್ತ ಸಂದರ್ಭದಲ್ಲಿ ಯುವ ಪೀಳಿಗೆಗೆ ತಿಳಿಸಿ ಹೇಳುವ ಅಗತ್ಯವಿದೆ ಎಂದರು.
ತಹಸೀಲ್ದಾರ್ ಟಿ.ಜೆ.ಸುರೇಶ್ ಆಚಾರ್ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸರ್ವಜ್ಞರ ಕೊಡುಗೆ ಅಪಾರವಾಗಿದ್ದು, ಮಹಾತ್ಮರ ವಿಚಾರಧಾರೆಗಳು ಸಮಾಜದ ಕನ್ನಡಿ ಇದ್ದಂತೆ. ಅವರ ತತ್ವ, ಆದರ್ಶ, ಸಂದೇಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿ ಸೂತ್ರಗಳಾಗಿವೆ. ಇದಕ್ಕೆ ಸರ್ವಜ್ಞ ನಮ್ಮೆಲ್ಲರ ನಡುವಿನ ಸಮ ಸಮಾಜದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ ಎಂದರು.
ತಾಲೂಕು ಕುಂಬಾರ ಸಂಘದ ಅಧ್ಯಕ್ಷ ರಮೇಶ್, ಗೌರವಾಧ್ಯಕ್ಷ ಮಹದೇವ ಶೆಟ್ಟಿ, ಉಪಾಧ್ಯಕ್ಷ ಆರ್.ಸಿದ್ದರಾಜು, ಕಾರ್ಯದರ್ಶಿ ಜೆ.ಮಹದೇವಸ್ವಾಮಿ, ವೋಡಾಫೋನ್ ಚಂದ್ರು, ಕೇತಹಳ್ಳಿ ರಾಜಣ್ಣ, ಗ್ರಾ.ಪಂ. ಸದಸ್ಯ ನಾಗೇಂದ್ರ, ಕೃಷ್ಣಾಪುರ ರಾಮಶೆಟ್ಟಿ, ಆಲಗೂಡು ಸಿದ್ದರಾಜು, ಮಾಕನಹಳ್ಳಿ ನಂಜುಂಡ, ಮೂಗೂರು ಕುಮಾರಸ್ವಾಮಿ ಇತರರು ಇದ್ದರು.