

ಯಳಂದೂರು: ತಾಲೂಕಿನ ಅಂಬಳೆ ಗ್ರಾಮದಲ್ಲಿ ನರೇಗಾ ಕಾಮಗಾರಿ ನಡೆಯುತ್ತಿದ್ದು, ಹಾಜರಾತಿಯಲ್ಲಿರುವ ವ್ಯಕ್ತಿಗಳು ಕೆಲಸಕ್ಕೆ ಬರುತ್ತಿಲ್ಲ. ಅಲ್ಲದೆ ಇಲ್ಲಿ ಅನೇಕ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಒಂಬುಡ್ಸ್‌ಮನ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ಅಂಬಳೆ ಕೆರೆ, ಶಾಂತಮ್ಮ ಜಮೀನಿನಿಂದ ಪುಟ್ಟಸ್ವಾಮಿ ಜಮೀನುವರೆಗಿನ ಕಾಲುವೆ ಅಭಿವೃದ್ಧಿ, ದೊರೆಸ್ವಾಮಿ ಜಮೀನಿನಿಂದ ಮಹಂತಾಳ ಕಟ್ಟೆವರೆಗಿನ ಕಾಲುವೆ ಅಭಿವೃದ್ಧಿಯನ್ನು ಪರಿಶೀಲಿಸಿದರು.
ಇಲ್ಲಿನ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಎನ್‌ಎಮ್‌ಆರ್‌ನಲ್ಲಿರುವ ವ್ಯಕ್ತಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂದಾಜುಪಟ್ಟಿ ಪ್ರಕಾರವೇ ಕಾಮಗಾರಿಗಳು ನಡೆಯುತ್ತಿವೆ. ಅಲ್ಲದೆ ನಿಗದಿತ ಜಾಗದಲ್ಲೇ ನಡೆಯುತ್ತಿದೆ. ನರೇಗಾ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡಬೇಕು ಎಂದು ನಮ್ಮ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿರಂತರವಾಗಿ ಕೆಲಸ ನೀಡಿ ಎಂದು ಇಲ್ಲಿನ ಕೂಲಿ ಕಾರ್ಮಿಕರು ಮನವಿ ಮಾಡಿದ್ದಾರೆ. ಹಾಗಾಗಿ ಈ ಕೆಲಸವನ್ನು ಮುಂದುವರಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಿಡಿಒ ಕಾವ್ಯಾ, ನರೇಗಾ ಜೆಇ ರಾಜೇಶ್ ಸೇರಿದಂತೆ ಅನೇಕರು ಇದ್ದರು.