ಚಿಕಿತ್ಸೆಗೆ ಸ್ಪಂದಿಸದೆ ವೃದ್ಧೆ ಮೃತ

chikthyamma
Published on

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಕ್ಷುಲಕ ವಿಚಾರಕ್ಕೆ ಕಲ್ಲಿನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ.


ಚಿಕ್ಕ ತಾಯಮ್ಮ (63) ಮೃತ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ.


ಶನಿವಾರ ಸಂಜೆ ಚಿಕ್ಕತಾಯಮ್ಮ ಹಾಗೂ ಈಕೆಯ ಪುತ್ರ ಶೇಖರ್ ಮನೆ ಮುಂದೆ ಕುಳಿತಿದ್ದರು. ಈ ವೇಳೆ ಆರೋಪಿ ಕೃಷ್ಣ ತಮ್ಮ ದನಗಳನ್ನು ಕರೆದುಕೊಂಡು ಹೋಗುವಾಗ ದನಗಳು ಶೇಖರ್‌ಗೆ ಸೇರಿದ ಬೈಕ್ ಅನ್ನು ಬೀಳಿಸಿದೆ. ಇದರಿಂದ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಆರೋಪಿ ಕೃಷ್ಣ, ಆತನ ಪುತ್ರ ಪ್ರೇಮ್, ಪುತ್ರಿ, ಸಂಜನಾ ಹಾಗೂ ಕೃಷ್ಣನ ಅಕ್ಕ ಕೆಂಪಮ್ಮ ವೃದ್ಧೆ ಮೇಲೆ ಹಲ್ಲೆ ಮಾಡಿದ್ದರು.


ಗಾಯಗೊಂಡ ವೃದ್ಧೆಯನ್ನು ಪುತ್ರ ಶೇಖರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಚಿಕ್ಕ ತಾಯಮ್ಮ ಮೃತಪಟ್ಟಿದ್ದಾರೆ. ಕೃಷ್ಣ ಹಾಗೂ ಕೆಂಪಮ್ಮ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರೇಮ್ ಮತ್ತು ಸಂಜನಾ ತಲೆ ಮರೆಸಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net