ವೃದ್ಧೆ ಮನೆಗೆ ಬೆಳಕಾದ ಸಿಎಂ ಸಿದ್ದು

CLK BASAPURA 27
Published on

ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಬಸಾಪುರ ಆಂಧ್ರಗಡಿ ಹಂಚಿನ ಗ್ರಾಮ. ಇಲ್ಲಿನ 80 ವರ್ಷದ ವೃದ್ಧೆ ದೊಣಮ್ಮ ಅನಾಥೆ. ಒಬ್ಬಂಟಿ, ಅನಕ್ಷರಸ್ಥೆ, ಅಸಹಾಯಕ ವೃದ್ಧೆ. ಧ್ವನಿಯಿಲ್ಲದ ಈಕೆಯ ಸಂಕಷ್ಟದ ಕೂಗು ಯಾರಿಗೆ ತಲುಪಲು ಸಾಧ್ಯ ಹೇಳಿ. ಮನೆಗೆ ವಿದ್ಯುತ್ ಇಲ್ಲದೆ 40 ವರ್ಷದ ಧೀರ್ಘ ಬದುಕು ಈಕೆಯದ್ದು.

ಇಂತಹದ್ದರಲ್ಲಿ ಆಕೆಯ ಪಾಲಿಗೆ ಶುಕ್ರವಾರ (ಆ.25) ಶುಭದಿನವಾಗಿ ಎದುರಾಗಿತ್ತು. ಅಚ್ಚರಿಯೆಂಬಂತೆ ಮನೆಗೆ ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ದೌಡಾಯಿಸಿದ್ದರು. ಒಂದು ರೂಪಾಯಿ ವೆಚ್ಚವಿಲ್ಲದೆ ಆಕೆಯ ಮನೆಗೆ ಕೆಲವೇ ಗಂಟೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಈ ಬೆಳವಣಿಗೆ ವೃದ್ಧೆಯ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.

ಪ್ರತಿಭಟನೆ, ಧರಣಿ, ಅಲೆದಾಟ ನಡೆಸಿದರೂ ಸರ್ಕಾರಿ ಸೌಲಭ್ಯ ಪಡೆಯುವುದು ಸವಾಲು ಆಗಿರುವ ದಿನಗಳಲ್ಲಿ ಈ ಕಾರ್ಯ ಗ್ರಾಮಸ್ಥರ ಸಂಭ್ರಮಕ್ಕೆ ಕಾರಣವಾಗಿತ್ತು.

ಹೌದು, ಚಳ್ಳಕೆರೆ ಕೇಂದ್ರದಿಂದ 35 ಕಿಮೀ ದೂರದಲ್ಲಿ ಬಸಾಪುರ ಆಂಧ್ರದ ಗಡಿ ಪ್ರದೇಶದಲ್ಲಿದೆ. ಇಲ್ಲಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವುದು ದುಸ್ಸಾಹಸ. ಅದರಲ್ಲೂ ನಲವತ್ತು ವರ್ಷದಿಂದ ಗ್ರಾಮದ ವೃದ್ಧೆ ದೊಣಮ್ಮ ಕತ್ತಲಲ್ಲಿಯೇ ಜೀವನ ಸಾಗಿಸುತ್ತಿದ್ದಳು. ಈಕೆಯ ಸಂಕಷ್ಟಕ್ಕೆ ಮರುಗಿದ್ದ ಗ್ರಾಮದ ಯುವಕ ಮಹೇಂದ್ರ, ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಂಬಂಧಿಸಿದವರಲ್ಲಿ ಕೋರಿಕೊಂಡಿದ್ದ.

ಇಷ್ಟಕ್ಕೆ ಸುಮ್ಮನಾಗದ ಯುವಕ, 76 ವರ್ಷಗಳ ಸ್ವಾತಂತ್ರ್ಯ ಆಚರಣೆ ಸಂಭ್ರಮದಲ್ಲಿರುವ ನಾಡು, ನಾಗರಿಕತೆ ಬೆಳೆದು ಶತಮಾನಗಳೇ ಕಂಡಿವೆ ಎಂದು ಹೇಳಿಕೊಳ್ಳುವ ಸಮಾಜದಲ್ಲಿ ಕನಿಷ್ಠ ಸೌಲಭ್ಯಗಳು ಬಡಕುಟುಂಬಕ್ಕೆ ದೊರೆಯುತ್ತಿಲ್ಲ. ಊರಿನ ಅನಾಥೆ ದೊಣಮ್ಮ ಮನೆ ವಿದ್ಯುತ್ ಬೆಳಕನ್ನೇ ಕಂಡಿಲ್ಲ ಎಂಬ ಮಾಹಿತಿಯನ್ನು ಆ.24ರಂದು ಮುಖ್ಯಮಂತ್ರಿ ಟ್ವೀಟರ್‌ಗೆ ಹಂಚಿಕೊಂಡಿದ್ದನು.

ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಕ್ಷಣ ಸಿಎಂ ಕಾರ್ಯಾಲಯ, ಚಿತ್ರದುರ್ಗ ಜಿಲ್ಲಾಡಳಿತವನ್ನು ಸಂಪರ್ಕಿಸಿ ಮುಖ್ಯಮಂತ್ರಿಗಳ ಆದೇಶ ರವಾನಿಸಿದೆ.

ಜಿಲ್ಲಾಧಿಕಾರಿ ದಿವ್ಯಾಪ್ರಭು, ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದ್ದು, ತಕ್ಷಣ ಸಂಬಂಧಿಸಿದವರು ಆ.25 ಶುಕ್ರವಾರ ಗ್ರಾಮಕ್ಕೆ ದೌಡಾಯಿಸಿ ವೃದ್ಧೆಯ ಮನೆಗೆ ವಿದ್ಯುತ್ ಸಂಪರ್ಕದ ಜತೆಗೆ ಮನೆಯಲ್ಲಿ ಸಂಪೂರ್ಣ ವೈರಿಂಗ್ ಅನ್ನು ಇಲಾಖೆ ವೆಚ್ಚದಲ್ಲಿ ಮಾಡುವ ಮೂಲಕ ಮನೆಗೆ ಬೆಳಕು ಕಲ್ಪಿಸಿದ್ದಾರೆ.

*ಟ್ವೀಟರ್‌ನಲ್ಲಿ ಸಿಎಂ ಸಂತಸ
ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ಚಿತ್ರಣಗಳನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಭ್ರಮದಿಂದ ತಮ್ಮ ಟ್ವೀಟರ್ ಖಾತೆಯಲ್ಲಿ ಶನಿವಾರ ಹಂಚಿಕೊಂಡಿದ್ದಾರೆ. ಚಳ್ಳಕೆರೆ ತಾಲೂಕಿನ ದೊಣಮ್ಮ ಎಂಬ ವೃದ್ಧೆ ಬಡತನದ ಕಾರಣಕ್ಕೆ ವಿದ್ಯುತ್ ಸಂಪರ್ಕ ಪಡೆಯದೆ ದೀಪದ ಆಶ್ರಯದಲ್ಲಿ ಬದುಕು ಸಾಗಿಸುತ್ತಿದ್ದ ವಿಚಾರ ಸ್ಥಳೀಯ ಮಹೇಂದ್ರ ನಮ್ಮ ಕಚೇರಿಯ ಗಮನಕ್ಕೆ ತಂದಿದ್ದ ಕಾರಣ, ತಕ್ಷಣ ಸ್ಪಂದಿಸಿ ಕೇವಲ 24 ಗಂಟೆ ಒಳಗೆ ಆ ತಾಯಿಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಬದಲಾವಣೆ ಮೂಡಿಸಲು ನಾವು ಸಿದ್ದರಿದ್ದೇವೆ, ನಮ್ಮ ಈ ಕಾರ್ಯಕ್ಕೆ ನಿಮ್ಮ ಸಹಕಾರವೂ ಇರಲಿ ಎಂದು ಟ್ವೀಟರ್ ಮೂಲಕ ಸಾರ್ವಜನಿಕರಲ್ಲಿ ಕೋರಿದ್ದಾರೆ.

ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರಗಳ ಹೊಣೆಗಾರಿಕೆ. ಈ ವಿಷಯದಲ್ಲಿ ಸಾಮಾಜಿಕ ನ್ಯಾಯದ ಆಡಳಿತದಂತೆ ಸಿದ್ದರಾಮಯ್ಯ ಅವರು, ಸಾಮಾನ್ಯ ಯುವಕನೊಬ್ಬನ ಸಾಮಾಜಿಕ ಜಾಲತಾಣದ ಮಾಹಿತಿಗೆ ಸ್ಪಂದಿಸಿ, ಅನಾಥೆ ವೃದ್ಧೆ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಮಾದರಿ ಕಾರ್ಯ. ಇದೇ ರೀತಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವತ್ತ ಗಮನಹರಿಸಬೇಕು.
ಡಾ.ಬಿ.ಯೋಗೇಶ್‌ಬಾಬು, ಜಿಪಂ ಮಾಜಿ ಸದಸ್ಯ, ಮೊಳಕಾಲ್ಮೂರು

ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳ ಆದೇಶ ನಮಗೆ ತಲುಪುತ್ತಿದ್ದಂತೆ ಕೆಲವೆ ಗಂಟೆಗಳಲ್ಲಿ ಅಜ್ಜಿಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಇಂತಹ ಸಮಸ್ಯೆಗಳು ಯಾವುದೇ ಊರಲ್ಲಿ ಇರಲಿ, ನಮ್ಮ ಗಮನಕ್ಕೆ ತಂದರೆ ಸೌಲಭ್ಯ ಕಲ್ಪಿಸಲು ನಾವು ಸಿದ್ದರಿದ್ದೆವೆ.
ದಂಡಪ್ಪ, ಎಸ್‌ಒ, ತಳಕು ಬೆಸ್ಕಾಂ

ಅನಾಥೆ ಅಜ್ಜಿಯ ಕತ್ತಲ ಬದುಕು ನನ್ನ ಮನಸ್ಸನ್ನು ಕಲುಕಿತ್ತು. ಈ ವಿಷಯವನ್ನು ಮುಖ್ಯಮಂತ್ರಿ ಟ್ವೀಟರ್ ಖಾತೆಗೆ ಹಂಚಿಕೊಂಡೇ. ತಕ್ಷಣ ಸಮಸ್ಯೆಗೆ ಪರಿಹಾರ ದೊರಕಿದೆ. ಅತ್ಯಂತ ಖುಷಿ ಆಗಿದೆ. ಮುಖ್ಯಮಂತ್ರಿಗಳಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೆನೆ. ಸಾಮಾಜಿಕ ಜಾಲತಾಣವನ್ನು ಉತ್ತಮ ಕೆಲಸಗಳಿಗೆ ಬಳಸಿಕೊಂಡರೇ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದಕ್ಕೆ ಈ ಕಾರ್ಯವೇ ಸಾಕ್ಷಿ.
ಮಹೇಂದ್ರ, ಬಸಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net