

ಮೈಸೂರು: ಜೆಡಿಎಸ್ ಮುಖಂಡ, ಮಾಜಿ ಶಾಸಕರಾದ ಬಂಡೆಪ್ಪ ಕಾಶೆಂಪೂರ್ ಅವರು ಕುರುಬ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದರು.
ನಗರದ ಬಿಜೆಪಿ ಕಚೇರಿಗೆ ಸೋಮವಾರ ರಾತ್ರಿ 8ರ ಸುಮಾರಿಗೆ ಆಗಮಿಸಿದ ಅವರು, ಸಮುದಾಯದ ಮುಖಂಡರೊಂದಿಗೆ ಸಮಾಲೋಚನೆ ಮಾಡಿದರು. ಸಮುದಾಯದ ಹೆಚ್ಚು ಮತಗಳು ಬಿಜೆಪಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಮುಖಂಡರಿಗೆ ಸೂಚಿಸಿದರು.
ಚುನಾವಣೆಯಲ್ಲಿ ಹೇಳಲು ಕಾಂಗ್ರೆಸ್‌ನವರ ಬಳಿ ಹೊಸ ವಿಷಯ ಇಲ್ಲ. ಹೀಗಾಗಿ, ಹಳೇ ಡೈಲಾಗ್ ಹೊಡೆಯುತ್ತಿದ್ದಾರೆ ಎಂದು ಕಾಶೆಂಪೂರ್ ಟೀಕಿಸಿದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಇದೇ ರೀತಿ ಹಳೇ ಡೈಲಾಗ್ ಹೇಳುತ್ತಿದ್ದರು.
ಆದಾಗ್ಯೂ, ಮೋದಿಯವರು ಪ್ರಧಾನಿಯಾಗಲಿಲ್ಲವೇ. ಈಗ ಮತ್ತೆ ಅದೇ ಹಳೇ ಹೇಳಿಕೆಯನ್ನೇ ನೀಡುತ್ತಿದ್ದಾರೆ. ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಲಿದ್ದು, ಮತ್ತೊಮ್ಮೆ ಕಾಂಗ್ರೆಸ್ ಹಳೇ ಡೈಲಾಗ್‌ಗಳು ವಿಫಲವಾಗಲಿವೆ ಎಂದರು
ಮೈಸೂರಿನಲ್ಲಿ ನಡೆದಿರುವ ಮೈತ್ರಿ ಸಮಾವೇಶದಲ್ಲಿ ಪ್ರಧಾನಿ ಹಾಗೂ ಮಾಜಿ ಪ್ರಧಾನಿಗಳು ಸೇರಿ ರಾಜ್ಯ ಮತ್ತು ದೇಶಕ್ಕೆ ಗೆಲುವಿನ ಸಂದೇಶ ನೀಡಿದ್ದು, ಮೋದಿಯವರೇ ನಮಗೆ ಸ್ಫೂರ್ತಿ ಎಂದು ಹೇಳಿದರು.
ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುವುದೇ ಕಾಂಗ್ರೆಸ್ ಗ್ಯಾರಂಟಿ. ಉಚಿತ ವಿದ್ಯುತ್ ಎಂದೇಳಿ ವ್ಯಾಪಾರಸ್ಥರಿಗೆ ಡಬಲ್ ವಿದ್ಯುತ್ ಬಿಲ್ ಶಾಕ್ ನೀಡಿದ್ದಾರೆ. ಕೆಜಿ ಅಕ್ಕಿಗೆ 70 ರೂ. ಆಗಿರುವಾಗ ನಿಮ್ಮ 35 ರೂ. ಅಕ್ಕಿ ಬಡವರ ಹೊಟ್ಟೆ ತುಂಬಿಸುವುದೇ ?ಎಂದು ಪ್ರಶ್ನಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಇನ್ನಿತರರಿದ್ದರು.