

ಮಂಜುನಾಥ ತಿಮ್ಮಯ್ಯ ಮೈಸೂರು
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಭವಿಷ್ಯದಲ್ಲಿ ಮೈಸೂರಿನ ಗತ ವೈಭವ, ಪರಂಪರೆ ಮತ್ತು ಚರಿತ್ರೆಯ ಕಥೆ ಹೇಳಲಿದೆ. ಅಲ್ಲದೆ ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ಐತಿಹಾಸಿಕ ತಾಣವಾಗಿ ರೂಪುಗೊಳ್ಳಲಿದೆ.
ಇಂದಿನ ಹಾಗೂ ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ನಗರಿಯ ಇತಿಹಾಸವನ್ನು ಹೇಳಲಿರುವ ಈ ಭವ್ಯ ಪಾರಂಪರಿಕ ಕಟ್ಟಡ ವಸ್ತುಸಂಗ್ರಹಾಲಯವಾಗಿ ಮರು ವಿನ್ಯಾಸಗೊಳ್ಳಲಿದೆ. ಇದರಿಂದ ಮತ್ತೊಂದು ಮ್ಯೂಸಿಯಂ ಪ್ರವಾಸಿಗರಿಗೆ ದೊರೆಯಲಿದೆ. ನಗರದ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಪುರಾತನವಾದ ಈ ಕಟ್ಟಡ ಸದ್ಯಕ್ಕೆ ಖಾಲಿಯಾಗಿದೆ.
ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಸಿದ್ದಾರ್ಥನಗರದಲ್ಲಿ ನಿರ್ಮಿಸಿರುವ ಜಿಲ್ಲಾಮಟ್ಟದ ಅಧಿಕಾರಿಗಳ ಸಂಕೀರ್ಣ ಕಟ್ಟಡಕ್ಕೆ 2023ರ ಜೂನ್‌ನಲ್ಲಿ ಸ್ಥಳಾಂತರಗೊಂಡಿವೆ. ಈ ಕಟ್ಟಡದಲ್ಲಿ ಸದ್ಯಕ್ಕೆ ಮೈಸೂರು ಉಪವಿಭಾಗಾಧಿಕಾರಿ ಕಚೇರಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ಯಾವುದೇ ಕಾರ್ಯಚಟುವಟಿಕೆಗಳಿಲ್ಲದೆ ಕಟ್ಟಡ ಇದೀಗ ಬಣಗುಡುತ್ತಿದೆ.
ಈ ಕಟ್ಟಡ ಮೈಸೂರು ನಗರದ ಪಾರಂಪರಿಕತೆಯ ಹೆಗ್ಗುರುತು. 128 ವರ್ಷಗಳ ಇತಿಹಾಸವಿರುವ ಇದನ್ನು ವಸ್ತು ಸಂಗ್ರಹಾಲಯವಾಗಿ ರೂಪಿಸುವ ಮೂಲಕ ಜೀರ್ಣೋದ್ಧಾರ ಮಾಡಬೇಕು ಎಂಬುದು ಪಾರಂಪರಿಕ ತಜ್ಞರ, ಸಾರ್ವಜನಿಕರ ಒತ್ತಾಸೆಯಾಗಿತ್ತು. ಇದಕ್ಕೆ ಜಿಲ್ಲಾಡಳಿತ ಕಿವಿಗೊಟ್ಟಿದೆ. ಕಟ್ಟಡವನ್ನು ಅಭಿವೃದ್ಧಿಪಡಿಸಿ ಮ್ಯೂಸಿಯಂ ಆಗಿ ರೂಪಿಸಲು ಮುಂದಾಗಿದ್ದು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ಸ್ವದೇಶ್ ದರ್ಶನ್ 2.0 ಯೋಜನೆ ಅಡಿಯಲ್ಲಿ ಈ ಕಾರ್ಯವನ್ನು ಕೈಗೊತ್ತಿಕೊಳ್ಳಲು ನಿರ್ಣಯಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಈ ಕೆಲಸವನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ.
ಸ್ವದೇಶ್ ದರ್ಶನ್ 2.0 ಯೋಜನೆಯಡಿ ಮೈಸೂರು ಸೇರಿದಂತೆ ಸುತ್ತಲಿನ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 70 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮೊದಲನೇ ಹಂತದಲ್ಲಿ ಟಾಂಗ್ ರೈಡ್ ಹಾಗೂ ಎಕೋಲಜಿಕಲ್ ಎಕ್ಸ್‌ಪಿರಿನ್ಸ್ ವಲಯಕ್ಕೆ 21.17 ಕೋಟಿ ರೂ. ಅನುದಾನಕ್ಕೆ ಡಿಪಿಆರ್ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.
2ನೇ ಹಂತದಲ್ಲಿ ಪಾರಂಪರಿಕ ಜಿಲ್ಲಾಧಿಕಾರಿ ಕಚೇರಿಯನ್ನು ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸುವ ಕಾರ್ಯವನ್ನು ತೆಗೆದುಕೊಳ್ಳಲಾಗುತ್ತಿದೆ. ಮೈಸೂರು ರಾಜರು, ದಿವಾನ್‌ಗಳು, ಆಡಳಿತಗಾರರು ನೀಡಿರುವ ಆಡಳಿತ ಸುಧಾರಣೆ, ಕೊಡುಗೆಗಳು ಹಾಗೂ ಮೈಸೂರು ಗತವೈಭವ, ಪರಂಪರೆಯನ್ನು ಇಲ್ಲಿ ಕಟ್ಟಿಕೊಡಲಾಗುತ್ತದೆ. ಅನೇಕ ಸರ್ಕಾರಿ ಆದೇಶ, ನಿರ್ಧಾರಗಳಿಗೆ ಸಾಕ್ಷಿಯಾಗಿರುವ ಈ ಕಟ್ಟಡ ಚರಿತ್ರೆಯನ್ನೂ ಸಾರಲಿದೆ.
ಶತಮಾನದ ಹಿಂದೆಯೇ ವೈಜ್ಞಾನಿಕವಾಗಿ, ಯೋಜನಾಬದ್ಧವಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ನಗರದ ಪಾರಂಪರಿಕ ಕಟ್ಟಡಗಳಲ್ಲಿ ಕಾಣಸಿಗದಂತಹ ಅಪರೂಪದ ತಾಂತ್ರಿಕತೆ ಇದರಲ್ಲಿ ಅಡಕವಾಗಿದೆ. ಮದ್ರಾಸ್ ಛಾವಣಿ ದುರ್ಬಲವಾದರೂ ಜಂತಿ ಜಾರದಂತೆ ತಡೆಯುವಂತಹ ಜಾಕ್ ವ್ಯವಸ್ಥೆ ಇದೆ. ಇಂಗ್ಲೆಂಡ್‌ನಿಂದ ಇಂಜಿನಿಯರಿಂಗ್ ಕೋರ್ಸ್ ಕಲಿತು ಬಂದವರು ಇದನ್ನು ನಿರ್ಮಿಸಿದ್ದಾರೆ. ಆದರೀಗ ನಿರ್ವಹಣೆ ಕೊರತೆಯಿಂದ ಇದು ದುಸ್ಥಿತಿಯತ್ತ ಸಾಗಿದೆ. ಆದ್ದರಿಂದ ಮೊದಲು ಇದನ್ನು ಸಂರಕ್ಷಣೆ ಮಾಡಬೇಕು ಎಂದು ಪಾರಂಪರಿಕ ತಜ್ಞರ ಆಗ್ರಹವಾಗಿದೆ.
ಗೊರ್ಡಾನ್ ಉದ್ಯಾನದಲ್ಲಿರುವ ಭವ್ಯವಾದ ಈ ಕಟ್ಟಡ 1895ರಲ್ಲಿ ನಿರ್ಮಾಣವಾಗಿದೆ. 1923ರವರೆಗೂ ಮೈಸೂರು ಪ್ರಜಾಪ್ರತಿನಿಧಿ ಸಭೆಯು ಇಲ್ಲಿ ನಡೆಯುತ್ತಿತ್ತು. ಇದರಲ್ಲಿ ಎರಡು ಸಭಾಂಗಣಗಳು, 27 ಕೊಠಡಿಗಳು, ಒಂದು ಖಜಾನೆ ಕೊಠಡಿ, ಕಟ್ಟಡದ ಸುತ್ತಲೂ ಆವಾರ ಪಡಸಾಲೆ ಇದೆ. ಎರಡು ಸಹ ಆವಾರಗಳಿವೆ. 2 ಅಂತಸ್ತುಗಳಿರುವ ಕಟ್ಟಡ ಮಧ್ಯದಲ್ಲಿನ ಗುಮ್ಮಟ ಹೊಂದಿದೆ. ಮೈಸೂರು ಅರಸು ವಂಶಕ್ಕೆ ಆಡಳಿತವನ್ನು ಮರು ಒಪ್ಪಿಸುವಾಗ ಬ್ರಿಟಿಷ್ ಕಮಿಷನರ್ ಮತ್ತು ನಂತರ ಬ್ರಿಟಿಷ್ ರೆಸಿಡೆಂಟ್ ಆಗಿದ್ದ ಸರ್ ಜೇಮ್ಸ್ ಗೊರ್ಡಾನ್ ಅವರ ಮನಸೆಳೆಯುವ ಪ್ರತಿಮೆ ಕಟ್ಟಡ ಎದುರಿದೆ.
ಹಳೇ ಡಿಸಿ ಕಚೇರಿ ಮೇಲೆ ಅನೇಕರು ಕಣ್ಣು ನೆಟ್ಟಿದೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕಟ್ಟಡವನ್ನು ತಮಗೆ ಹಸ್ತಾಂತರ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿವೆ.
ಈಗಿರುವ ಜಿಲ್ಲಾ ಪಂಚಾಯಿತಿಯನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಿ, ಖಾಲಿಯಾಗುವ ಜಿಪಂ ಕಟ್ಟಡವನ್ನು ನ್ಯಾಯಾಲಯಕ್ಕೆ ಬಿಟ್ಟುಕೊಡಬೇಕು ಎಂದು ವಕೀಲರ ಸಂಘ ಒತ್ತಾಯಿಸುತ್ತಿದೆ. ಈ ನಡುವೆ, ಇದು ವಸ್ತು ಸಂಗ್ರಹಾಲಯಕ್ಕೆ ಬಳಕೆಯಾಗುತ್ತಿರುವುದು ಸೂಕ್ತ ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ವೆಲ್ಲಿಂಗ್‌ಟನ್ ಭವನದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕಲಾ ಗ್ಯಾಲರಿ, ಮೈಸೂರು ವಿವಿ ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ ಜಾನಪದ ವಸ್ತುಸಂಗ್ರಹಾಲಯ, ರೈಲ್ವೆ ಮ್ಯೂಸಿಯಂ ನಗರದ ಪ್ರಮುಖ ಮ್ಯೂಸಿಯಂಗಳು. ಈ ಸಾಲಿಗೆ ಇದು ಸಹ ಸೇರ್ಪಡೆಯಾಗಲಿದೆ. ನಗರದ ಮಧ್ಯಭಾಗದಲ್ಲಿರುವುದರಿಂದ ಪ್ರವಾಸಿಗರ ಭೇಟಿಗೂ ಅನುಕೂಲವಾಗಲಿದೆ.
ಪಾರಂಪರಿಕ ಹಿರಿಮೆ ಇರುವ ಹಳೇ ಜಿಲ್ಲಾಧಿಕಾರಿ ಕಟ್ಟಡವನ್ನು ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅದಕ್ಕಾಗಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ.ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ