ಓಲ್ಡ್ ಡಿಸಿ ಆಫೀಸ್ ಇನ್ನು ಹೈಕೋರ್ಟ್ ಪೀಠ?, ನಿಕಟಪೂರ್ವ ಜಿಲ್ಲಾಧಿಕಾರಿ ಕಚೇರಿಯಲ್ಲೇ ಕಾರ್ಯನಿರ್ವಹಣೆಗೆ ಅಂತಿಮ ಸಿದ್ದತೆ

Mng-may19-dc office
ಹೈಕೋರ್ಟ್ ಬೆಂಚ್ ಸ್ಥಾಪಿಸಲು ಅವಕಾಶವಿರುವ ಮಂಗಳೂರಿನಲ್ಲಿರು ನಿಕಟಪೂರ್ವ ಜಿಲ್ಲಾಧಿಕಾರಿ ಕಚೇರಿ.
Published on

-ಶ್ರವಣ್‌ಕುಮಾರ್ ನಾಳ, ಮಂಗಳೂರು

ಮಂಗಳೂರಿನಲ್ಲಿರು ನಿಕಟಪೂರ್ವ ಜಿಲ್ಲಾಧಿಕಾರಿ ಕಚೇರಿಯಿನ್ನು ಹೈಕೋರ್ಟ್ ಪೀಠವಾನ್ನಾತಗಿಸುವ ಮಹತ್ತರ ಯೋಜನೆಗೆ ರಾಜ್ಯ ಸರ್ಕಾರ ಕೈ ಹಾಕಿದ್ದು, ಬಹುದಿನಗಳ ಕರಾವಳಿಗರ ಬೇಡಿಕೆಯಾದ ಮಂಗಳೂರಿನಲ್ಲಿ ಹೈಕೋರ್ಟ್ ಬೆಂಚ್ ಹೊಂದುವ ಕನಸು ಮತ್ತೆ ಮುನ್ನೆಲೆಗೆ ಬಂದಿದೆ.

ಮಂಗಳೂರು ಕೇಂದ್ರ ಸ್ಥಾನದಿಂದ ಜೈಲು ಸ್ಥಳಾಂತರವಾದ ಬಳಿಕ ಇಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಸರ್ಕಾದ ಇರಾದೆಯಿದ್ದರೂ ಸಧ್ಯಕ್ಕೆ ಜೈಲು ಸ್ಥಳಾಂತರ ಕಷ್ಟ. ಇದರಿಂದ ಹೈಕೋರ್ಟ್ ಪೀಠ ಸ್ಥಾಪನೆಗೆ ಹಿನ್ನೆಯಾಗಿತ್ತು. ಪ್ರಸ್ತುತ ಭಾರತದ ರಾಷ್ಟ್ರಪತಿಗಳು ಹೊರಡಿಸಿರುವ ದಿ ಹೈಕೋಟ್ ಆಫ್ ಕರ್ನಾಟಕ ಆರ್ಡರ್, 2013 ಆದೇಶ ದಿನಾಂಕ 18.83.2013ರ ಅನ್ವಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಸಾರ್ವಜನಿಕರ ವ್ಯಾಜ್ಯಗಳನ್ನು ಬೆಂ.ಗಳೂರು ಹೈಕೋರ್ಟ್‌ನ ಪ್ರಧಾನ ಪೀಠದಲ್ಲಿ ನಿರ್ವಹಿಸಲಾಗುತ್ತಿದೆ. ಹೈಕೋರ್ಟ್ ಪೀಠ ಮಂಗಳೂರು ನಗರದೊಳಗಿನ ಸುಂದರ ಹಾಗೂ ಸುಸಜ್ಜಿತ ಪ್ರದೇಶದಲ್ಲೇ ನಿರ್ಮಿಸುವ ಸರ್ಕಾರದ ಇರಾದೆಯಿದ್ದರೂ ಸಮರ್ಪಕ ಬೆಂಚ್ ಸ್ಥಾಪನೆಗೆ ಸಮರ್ಪಕ ಕಚೇರಿ ನಿವೇಶನ ಹಾಗೂ ವಿಶಾಲ ಕಟ್ಟಡದ ಕೊರತೆ ಇತ್ತು. ಇದೇ ಕಾರಣಕ್ಕೆ ಈ ಹಿಂದಿನ ಪ್ರಸ್ತಾವಣೆಗಳನ್ನೆಲ್ಲಾ ಸರ್ಕಾರ ಮೂಲೆಗೆ ತಳ್ಳಿತ್ತು. ಸಧ್ಯಕ್ಕೆ ಈ ಕಚೇರಿಯನ್ನು ಕೋರ್ಟ್ ಹೊರತುಪಡಿಸಿ ಬೇರೆಯಾವ ಇಲಾಖೆಗೂ ಬಿಟ್ಟು ಕೊಡದಂತೆ ರಾಜ್ಯದಿಂದ ನಿರ್ದೇಶನವೂ ಬಂದಿದೆ.

* ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ಮಂಗಳೂರಿನ ಹೆಬ್ಬಾಗಿಲು ಪಡೀಲ್‌ನಲ್ಲಿ ಪಡೀಲ್‌ನಲ್ಲಿ ದ.ಕ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ನೂತನ ಸಂಕೀರ್ಣ ಕಾರ್ಯಾರಂಭಗೊಂಡಿರುವುದರಿಂದ ನಿಕಟಪೂರ್ವ ಡಿಸಿ ಕಚೇರಿಯನ್ನು ಹೈಕೋರ್ಟ್ ಬೆಂಚ್ ಆಗಿ ಪರಿವರ್ತಿಸಲು ಪ್ರಸ್ತಾವನೆಯೊಂದು ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ಕಚೇರಿಯ ಪಕ್ಕದಲ್ಲೇ ಇರುವ ನಾನ್ನೂರು ವರ್ಷಕ್ಕೂ ಹಳೆಯ ದ.ಕ. ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಿಕೊಂಡು ಮ್ಯೂಸಿಯಂ ಆಗಿ ಅಭಿವೃದ್ಧಿ ಪಡಿಸುವ ಬಗ್ಗೆ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಈ ಎಲ್ಲಾ ಯೋಜನಾ ಪ್ರಸ್ತಾವಣೆಗಳಿಗ ರಾಜ್ಯ ಮುಖ್ಯಮಂತ್ರಿಗಳ ಅಂಗಳದಲ್ಲಿದ್ದು, ಅನುಮೋದನೆ ಸಿಕ್ಕಿದರೆ ಒಂದೇ ಪ್ರದೇಶದಲ್ಲಿ ಮಂಗಳೂರು ಹೈಕೋರ್ಟ್ ಪೀಠ ಹಾಗೂ ಮ್ಯೂಸಿಯಂ ಕಾರ್ಯನಿರ್ವಹಿಸಿ ಜನಾಕರ್ಷನೆಗೊಳ್ಳಲಿದೆ.

*ಹೈಕೋರ್ಟ್ ಪೀಠ ಅನಿವಾರ್ಯವೇ?

ಕರಾವಳಿ ಕರ್ನಾಟಕದ ಪ್ರಮುಖ ಹಾಗೂ ವಿಶೇಷ ಪ್ರಕರಣಗಳಿಗೆ ಬೆಂಗಳೂರಿನ ಹೈಕೋರ್ಟ್‌ನ್ನೇ ಅವಲಂಬಿಸುವುದು ಅನಿವಾರ್ಯ, ಸಾರ್ವಜನಿಕರಿಗೂ ಇದು ಕಿರಿಕಿರಿ. ಬೆಂಗಳೂರಿನ ಹೈಕೋರ್ಟ್ ಪ್ರಿಸ್ಸಿಪಲ್ ಬೆಂಚ್‌ನ ಹೆಚ್ಚುವರಿ ಬೆಂಚ್ ಮಂಗಳೂರಿನಲ್ಲೂ ಸ್ಥಾಪಿಸಲು ಪೂರ್ಣ ಪ್ರಮಾಣದ ಅವಕಾಶವಿದ್ದು, ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಜೆ.ಸಿ ಮಾಧುಸ್ವಾಮಿಗೆ ಹಿರಿಯ ವಕೀಲರಿಂದ ಸಮಗ್ರ ವರದಿ ಸಲ್ಲಿಸಲಾಗಿತ್ತು. ಇದಾದ ಬಳಿಕ ಇತ್ತೀಚೆಗೆ ಮಂಗಳೂರಿನ ವಕೀಲರ ಸಂಘದಿಂದ ಹಾಗೂ ಜನಪ್ರತಿನಿಧಿಗಳಿಂದ ಸರ್ಕಾರಕ್ಕೆ ಮನವಿಯು ಸ್ವೀಕೃತವಾಗಿತ್ತು. ಹೈಕೋರ್ಟ್ ಬೆಂಚ್ ಸ್ಥಾಪಿಸಲು ಚರ್ಚೆಗಳು ನಡೆದರೂ ಸರ್ಕಾರ ಈಬಗ್ಗೆ ಯಾವುದೇ ಯೊಜನಾ ಕ್ರಮ ಕೈಗೊಂಡಿಲ್ಲ.

----------------

ಏನಿದು ಹೈಕೋರ್ಟ್ ಬೆಂಚ್

ಬೆಂಗಳೂರಿನ ಹೈಕೋರ್ಟ್ ಪ್ರಿಸ್ಸಿಪಲ್ ಬೆಂಚ್‌ಗೆ ಹೆಚ್ಚು ಒತ್ತಡ ತಡೆಯಲು ರಾಜ್ಯದ ವಿವಿಧ ಮೂಲೆಗಳಿಂದ ಹರಿದುಬರುವ ಪ್ರಕರಣಗಳ ವಿಲೆಗೆ ಆಯಾ ಭಾಗದಲ್ಲೇ ಹೆಚ್ಚುವರಿ ಹೈಕೋರ್ಟ್ ಬೆಂಚ್‌ಗಳನ್ನು ಸ್ತಾಪಿಸಲು ಅವಕಾಶ ಇದೆ. ಈಗಾಗಲೇ ಕಲಬುರ್ಗಿ ಹಾಗೂ ಹುಬ್ಬಳ್ಳಿಯಲ್ಲಿ ಹೈಕೋರ್ಟ್ ಬೆಂಚ್ ಸ್ಥಾಪಿಸಲಾಗಿದೆ. ಇದೇ ರೀತಿ ಕರಾವಳಿ ಜಿಲ್ಲೆಗಳ ಜಿಲ್ಲಾ ಕೋರ್ಟ್ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡುವವರ ಸಂಖ್ಯೆ ಹೆಚ್ಚಾಗಿದ್ದು, ಹೈಕೋರ್ಟ್ ಪ್ರಿಸ್ಸಿಪಲ್ ಬೆಂಚ್‌ಗೆ ಹೆಚ್ಚು ಒತ್ತಡ ಇದೆ. ಈ ನಿಟ್ಟಿನಲ್ಲಿ 3-4 ಜಿಲ್ಲೆಗಳ ವ್ಯಾಪ್ತಿಗೆ ಹೈಕೋರ್ಟ್ ಬೆಂಚ್ ಸ್ಥಾಪಿಸಲು ಹಲವು ವರ್ಷಗಳಿಂದ ಬೇಡಿಕೆ ವ್ಯಕ್ತವಾಗಿದೆ.

-----------------

ಮಂಗಳೂರಿನಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪನೆ ಮಾಡುವ ಸಂಬಂಧ ವಕೀಲರ ಸಂಘದಿಂದ ಹಾಗೂ ಜನಪ್ರತಿನಿಧಿಗಳಿಂದ ಮನವಿಯು ಸರ್ಕಾರಕ್ಕೆ ಸ್ವೀಕೃತವಾದೆ. ಪ್ರಸ್ತುತ ಖಾಲಿಯಾಗಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಹೈಕೋರ್ಟ್ ಸಂಚಾರಿ ಪೀಠಕ್ಕೆ ಕಾಯ್ದಿರಿಸಲು ಸಿಎಂ ಬಳಿ ಮನವಿ ಮಾಡಿದ್ದರಿಂದ ಮೌಕಿಕ ಒಪ್ಪಿಗೆ ನೀಡಿ ಪರಿಶೀಲನೆಗೆ ಸೂಚಿಸಿದ್ದಾರೆ. ಸಿಎಂ ನೇತೃತ್ವದಲ್ಲಿ ನಡೆಯುವ ಪ್ರಗತಿ ಪರಿಶೀಲನೆಯಲ್ಲಿ ಈ ಎಲ್ಲ ಯೋಜನೆಗಳ ಪ್ರಸ್ತಾಪ ಹಾಗೂ ಚರ್ಚೆ ನಡೆಯಲಿದೆ.

-ಐವನ್ ಡಿಸೋಜಾ, ಎಂಎಲ್‌ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net