

ಭದ್ರಾವತಿ: ಶೈಕ್ಷಣಿಕ ಕಾರ್ಯಕ್ರಮಗಳು ಸೇರಿದಂತೆ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಅನುಕೂಲವಾಗಲೆಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ನಿರ್ಮಾಣವಾದ ಗುರುಭವನ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಲಾಗಿದೆ. ನೂತನ ಕಟ್ಟಡ ಕಾಮಗಾರಿಗಾಗಿ ಶಂಕುಸ್ಥಾಪನೆ ನೆರವೇರಿದರೂ ಅನುದಾನದ ಕೊರತೆ ಎದುರಾಗಿದ್ದು ಸದ್ಯಕ್ಕೆ ಕಾಮಗಾರಿ ಮರೀಚಿಕೆಯಾಗಿದೆ.
ಅಂದಾಜು 6.5 ಕೋಟಿ ರೂ. ವೆಚ್ಚದಲ್ಲಿ ನೂತನ ಭವನ ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಪ್ರಸ್ತುತ ಸಂಸದರ ನಿಧಿಯಿಂದ 2 ಕೋಟಿ ರೂ ಗಳ ಮಂಜೂರಾತಿ ಸಿದ್ಧವಿದ್ದರೂ ಸರ್ಕಾರ ಬದಲಾವಣೆಯಾದ ಹಿನ್ನಲೆಯಲ್ಲಿ ಯಾವುದೇ ಹಣ ಬಿಡುಗಡೆಯಾಗಿಲ್ಲ. ಅದರಿಂದಾಗಿ ಕಟ್ಟಡ ಕಾಮಗಾರಿಯೂ ಆರಂಭವಾಗುತ್ತಿಲ್ಲ. ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಿಂಭಾಗ 1991ರಲ್ಲಿ ರಾಜ್ಯಪಾಲರಾಗಿದ್ದ ವೆಂಕಟಸುಬ್ಬಯ್ಯ ಅವರಿಂದ ಉದ್ಘಾಟನೆಗೊಂಡ ಗುರುಭವನ ನಂತರದ ದಿನಗಳಲ್ಲಿ ಶಿಕ್ಷಕರ ವಿವಿಧ ತರಬೇತಿ ಶಿಬಿರಗಳು, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಹಕಾರಿ ಸಂಘಗಳ ವಾರ್ಷಿಕ ಮಹಾಸಭೆ, ಮದುವೆ ಸಮಾರಂಭಗಳು ಸೇರಿದಂತೆ ಸಾರ್ವಜನಿಕ ಸಭೆ ಸಮಾರಂಭಗಳು ತಕ್ಕಮಟ್ಟಿಗೆ ನಡೆಯುತ್ತಿದ್ದವು. ಅಂದಿನ ಕಾಲಘಟ್ಟದಲ್ಲಿ ಅಷ್ಟಾಗಿ ಕಲ್ಯಾಣ ಮಂಟಪ ಸಭಾಭವನಗಳು ಹೆಚ್ಚಾಗಿರಲಿಲ್ಲ. ಹಾಗಾಗಿ ಅಷ್ಟು ದೊಡ್ಡ ಭವನವಲ್ಲದಿದ್ದರೂ ಮಧ್ಯಮ ಪ್ರಮಾಣದ ಕಾರ್ಯಕ್ರಮಗಳನ್ನು ನಡೆಸಬಹುದಾಗಿತ್ತು.
ನಂತರದ ದಿನಗಳಲ್ಲಿ ಕಟ್ಟಡದ ಶಿಥಿಲಾವಸ್ಥೆ ತಲುಪಿದ್ದು ಆರಂಭದಲ್ಲಿ ನಡೆಯುತ್ತಿದ್ದ ಸಭೆ ಸಮಾರಂಭಗಳ ಸಂಖ್ಯೆ ಕಡಿಮೆಯಾಯಿತು. ಅದೇ ಸಂದರ್ಭದಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣಾ ಯೋಜನೆ ಆರಂಭ ಮಾಡಿದ್ದು ಸೈಕಲ್ ಬಿಡಿಭಾಗಗಳ ಜೋಡಣೆಗಾಗಿ ಕಟ್ಟಡವನ್ನು ಕಾಯ್ದಿರಿಸಲಾಯಿತು. ಮಳೆ ನೀರು ಸೋರಿಕೆ ಹೆಚ್ಚಾದ ಪರಿಣಾಮ ಸೈಕಲ್ ಜೋಡಣೆಯ ಕಾರ್ಯವೂ ಸ್ಥಗಿತಗೊಂಡು ಕಟ್ಟಡದ ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ನಿಂತು ಕಳ್ಳಕಾಕರ ವಾಸಸ್ಥಳವಾಗಿ, ಕಟ್ಟಡದ ಆವರಣದ ತುಂಬ ಗಿಡಗಂಟೆಗಳು ಬೆಳೆದು ಸಂಪೂರ್ಣ ಹಾಳಾಯಿತು. ಅಂದು ಪ್ರತಿ ಶಿಕ್ಷಕರಿಂದ 150 ರೂ.ಗಳನ್ನು 2 ಕಂತುಗಳ ಮೂಲಕ ಸಂಗ್ರಹಿಸಿ ಸರ್ಕಾರದ ಅನುದಾನ ಅಂದಾಜು 30 ಲಕ್ಷ ರೂ ಗಳೊಂದಿಗೆ ಕಟ್ಟಲಾದ ಕಟ್ಟಡ ಈಗ ಕೆಡವಲಾಗಿದೆ.
ಒಟ್ಟಾರೆ ಹೊಸ ಗುರುಭವನ ಕಟ್ಟಡ ಕಾಮಗಾರಿ ಆರಂಭ ಆಗುತ್ತಿಲ್ಲ. ಇದೇ ಜಾಗದ ಹಿಂಭಾಗದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನ ಕಟ್ಟಡ ಕಾಮಗಾರಿ ಸಂಪೂರ್ಣವೂ ಆಗುತ್ತಿಲ್ಲ. ಅದ್ದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನಕ ಮಂಟಪವೇ ಗತಿಯಾಗಿದೆ.