

ಕಳಸ: ಕುದುರೆಮುಖ-ಎಸ್.ಕೆ.ಬಾರ್ಡರ್ ರಾಜ್ಯಹೆದ್ದಾರಿ ರಸ್ತೆ ನಿರ್ವಹಣೆ ಕಾಮಗಾರಿ ಕಳಪೆ ಕಾಮಗಾರಿಯಾಗಿದ್ದು, ಕೂಡಲೇ ಮರು ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಯಿಸಿ ಕುದುರೆಮುಖದಲ್ಲಿ ವಾಣಿಜ್ಯ ವಾಹನಗಳ ಮಾಲೀಕರ ಸಂಘ ಮತ್ತು ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.
ಕಳಸದಿಂದ ಕರಾವಳಿ ಸಂಪರ್ಕಿಸುವ ರಸ್ತೆ ಹಾಳಾಗಿ ಕುದುರೆಮುಖ ರಸ್ತೆ ಅವ್ಯವಸ್ಥೆಯಿಂದ ಯಾವುದೇ ವಾಹನಗಳು ಸಂಚರಿಸದ ಪರಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಕುದುರೆಮುಖ-ಕೆಂಗನಕೊಂಡ ರಸ್ತೆ ಕಾಮಗಾರಿ ಆರಂಭವಾಗಿ ಮೂರು ವರ್ಷವಾದರೂ ಕಾಮಗಾರಿ ಪೂರ್ಣಗೊಳ್ಳದೆ ನಿಂತು ಹೋಗಿತ್ತು. ಈ ಮಧ್ಯೆ ಕೊಟ್ಟಿಗೆಹಾರ- ಎಸ್.ಕೆ.ಬಾರ್ಡರ್ ವರೆಗಿನ 91ಕಿಮೀ ರಸ್ತೆಯ ನಿರ್ವಹಣೆಗೆ 55 ಲಕ್ಷ ಮಂಜೂರಾಗಿತ್ತು. ಆದರೆ ಈ ಕಾಮಗಾರಿಯನ್ನೂ ಸರಿಯಾಗಿ ಮಾಡದಿರುವುದಕ್ಕೆ ವಾಣಿಜ್ಯ ವಾಹನ ಮಾಲೀಕರು ಹಾಗೂ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಕೆ.ಸಿ.ಧರಣೇಂದ್ರ ಮಾತನಾಡಿ, ಸರ್ಕಾರದ ಹಣವನ್ನು ನ್ಯಾಯಯುತವಾಗಿ ಬಳಸಿಕೊಂಡು ಕಾಮಗಾರಿ ನಡೆಸಿ ರಸ್ತೆ ಅವ್ಯವಸ್ಥೆಯಿಂದ ಯಾರೂ ಈ ರಾಜ್ಯಹೆದ್ದಾರಿಯಲ್ಲಿ ಪ್ರಯಾಣ ಮಾಡದ ಪರಿಸ್ಥಿತಿ ಎದುರಾಗಿದೆ. ಈಗ ರಸ್ತೆ ನಿರ್ವಹಣೆಗೆ ಅರಣ್ಯ ಇಲಾಖೆ ತಕರಾರು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಇಲ್ಲಿಯೇ ಇದ್ದಾರೆ. ಈ ಕೂಡಲೇ ಸಮಸ್ಯೆ ಬಗೆಹರಿಸಿ ಕಾಮಗಾರಿ ಪ್ರಾರಂಭಿಸಬೇಕು ಇಲ್ಲವಾದಲ್ಲಿ ಡಿ.15ರಂದು ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.