

ಬಾಗಲಕೋಟೆ: ಜಿಲ್ಲೆಯಲ್ಲಿರುವ ವಿವಿಧ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳ ಫಲಿತಾಂಶ ಸುಧಾರಣೆಗೆ ಕ್ರಮಕೈಗೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಸತಿ ನಿಲಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಲಿತಾಂಶಗಳ ವಿಮರ್ಶೆ ಮಾಡಿಕೊಂಡು ಕಡಿಮೆ ಲಿತಾಂಶ ಪಡೆದಿರುವ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಹಾಗೂ ಚಟುವಟಿಕೆಗಳನ್ನು ಕೈಗೊಂಡು ಲಿತಾಂಶ ಸುಧಾರಣೆಗೆ ಕ್ರಮವಹಿಸಬೇಕು. ಮಕ್ಕಳ ವಿಚಾರದಲ್ಲಿ ನಿರ್ಲಕ್ಷೃ ಸಲ್ಲದು ಎಂದರು.
ವಸತಿ ನಿಲಯಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೂ ಸಹ ಲಿತಾಂಶದಲ್ಲಿ ಮಾತ್ರ ಕಡಿಮೆಯಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೂರಕ್ಕೆ ನೂರರಷ್ಟು ಲಿತಾಂಶವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಹಿಡಿದು ತಾಲೂಕು ಮಟ್ಟ ಹಾಗೂ ವಸತಿ ನಿಲಯದ ಮೇಲ್ವಿಚಾರಕರು ಸಹ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಲು ತಿಳಿಸಿದ ಅವರು ಲಿತಾಂಶ ಸುಧಾರಣೆ ಆಗದಿದ್ದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರತಿಯೊಂದು ವಸತಿ ಶಾಲೆಯಲ್ಲಿ ಮಕ್ಕಳ ಬಯೋಮ್ಯಾಟ್ರಿಕ್ ಹಾಜರಾತಿ ಕಡ್ಡಾಯವಾಗಿ ಮಾಡುವ ಮೂಲಕ ನಿಲಯಗಳಲ್ಲಿ ಸದ್ಯ ಇರುವ ಮೂಲ ಸೌಲಭ್ಯಗಳನ್ನೇ ಸರಿಪಡಿಸಿಕೊಂಡು ಸರಿಯಾಗಿ ನಿರ್ವಹಣೆಯಾಗುವಂತೆ ನೋಡಿಕೊಳ್ಳಬೇಕು. ಪದೇ ಪದೇ ಸಮಸ್ಯೆಗಳನ್ನು ಹೇಳುವಂತಿಲ್ಲ. ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಿ ಉತ್ತಮವಾದ ಶೈಕ್ಷಣಿಕ ವಾತಾವರಣ ಸೃಷ್ಟಿಸುವ ಕಾರ್ಯವಾಗಬೇಕು. ಅಂದಾಗ ಮಾತ್ರ ಮಕ್ಕಳ ಬೆಳೆವಣಿಗೆ ಕಾಣಬಹುದಾಗಿದೆ. ಮೇಲ್ವಿಚಾರಕರು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ಜೊತೆ ಶೈಕ್ಷಣಿಕ ಚಟುವಟಿಕೆ ಬಗ್ಗೆ ಚರ್ಚಿಸಿ ಲಿತಾಂಶ ಸುಧಾರಣೆ ಕ್ರಮವಹಿಸಲು ತಿಳಿಸಿದರು.
ಮೆನುವಿನ ಪ್ರಕಾರ ಮಕ್ಕಳಿಗೆ ಗುಣಮಟ್ಟದ ಶುಚಿಯಾದ ಆಹಾರ ಪೂರೈಸಬೇಕು. ವಸತಿ ನಿಲಯಗಳಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸುವುದರ ಜೊತೆಗೆ ನಿಲಯದ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಅವರ ಶೈಕ್ಷಣಿಕ ಬೆಳೆವಣಿಗೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ತಿಳಿಸಿದರು. ತಮ್ಮ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಶಿಸ್ತುಕ್ರಮಕ್ಕೆ ಮುಂದಾಗುವುದಾಗಿ ಸಿಇಒ ಕುರೇರ ಸೂಚನೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈರಣ್ಣ ಆಶಾಪುರ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ವಸತಿ ನಿಲಯಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.