

ಹನುಮಸಾಗರ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿದಿವೆ.
ಮಧ್ಯರಾತ್ರಿ ಎರಡು ಗಂಟೆಗೂ ಗಾಳಿ ಸಹಿತ ಮಳೆ ಸುರಿದಿದ್ದು, ಅನ್ನದಾತರ ಮುಖದಲ್ಲಿ ಸಂತಸ ಮನೆ ಮಾಡಿದೆ. ಈ ವರ್ಷದಲ್ಲಿ ಇದೆ ಮೊದಲ ಬಾರಿ ಉತ್ತಮ ಮಳೆಯಾಗಿದೆ. ಮೆಕ್ಕೆಜೋಳ, ಜೋಳ, ಸಜ್ಜೆ ಸೇರಿ ವಿವಿಧ ಬೆಳೆಗಳಿಗೆ ತುಂಬಾ ಅನುಕೂಲವಾಗಲಿದ್ದು, ಉತ್ತಮ ಫಸಲು ಬರುತ್ತದೆ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.
ಇಷ್ಟು ದಿನ ಜಿಟಿಜಿಟಿಯಾಗಿ ಸುರಿಯುತ್ತಿದ್ದ ಮಳೆ ರಾತ್ರಿ ಉತ್ತಮವಾಗಿ ಸುರಿದಿದೆ. ಸಮೀಪದ ಕಬ್ಬರಗಿ ಗ್ರಾಮದ ಕಲ್ಯಾಣ ಕರ್ನಾಟಕದ ಏಕೈಕ ಜಲಪಾತ ಕಪೀಲತೀರ್ಥ ಭೋರ್ಗೆರೆಯುತ್ತಿದೆ. ಪಟ್ಟಣದಿಂದ ಗಜೇಂದ್ರಗಡಕ್ಕೆ ಹೋಗುವ ರಸ್ತೆಯ ಗುಂಡಿಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ರಸ್ತೆ ಕೆರೆಯಾಗಿ ಮಾರ್ಪಟ್ಟಿದ್ದರಿಂದ ಆ ಮಾರ್ಗವಾಗಿ ಶಾಲೆಗೆ ತೆರಳಲು ವಿದ್ಯಾರ್ಥಿಗಳು, ಜಮೀನುಗಳಿಗೆ ತೆರಳಲು ರೈತರು ತೊಂದರೆ ಅನುಭವಿಸಬೇಕಾಯಿತು.
ಬೈಕ್ ಸವಾರರು ನೀರಿನಲ್ಲಿ ತಳ್ಳಿಕೊಂಡು ಹೋಗಬೇಕಾಯಿತು. ನಂತರ ರಸ್ತೆಯಲ್ಲಿ ನಿಂತ ನೀರು ಹರಿದು ಹೋಗಲು ಗ್ರಾಪಂನಿಂದ ಜೆಸಿಬಿ ಮೂಲಕ ದಾರಿ ಮಾಡಲಾಯಿತು.