

ಯಲ್ಲಾಪುರ: ಮನೆಯ ಸುತ್ತಲಿನ ಪರಿಸರದ ಸೊಬಗು ಹೆಚ್ಚಿಸಲು ಹೂವಿನ ಗಿಡಗಳನ್ನು ಬೆಳೆಸುವುದು ಮಹಿಳೆಯರ ಆಸಕ್ತಿ ಹಾಗೂ ಹವ್ಯಾಸವೂ ಹೌದು. ಹಾಗೆ ಆರಂಭವಾದ ಹವ್ಯಾಸದಿಂದ, ಹೂ ಗಿಡಗಳದ್ದೇ ನರ್ಸರಿ ಮಾಡುವ ಮಟ್ಟಕ್ಕೆ ಬೆಳೆದು ಮಾದರಿ ಕೃಷಿಕರಾದವರು ತಾಲೂಕಿನ ಜಮಗುಳಿಯ ಸವಿತಾ ವಿಶ್ವನಾಥ ಗಾಂವ್ಕರ.
ಮೊದಲು ಎಲ್ಲರಂತೆ ಸಹಜವಾಗಿ ಮನೆಯಂಗಳದಲ್ಲಿ ಹಲವು ಬಗೆಯ ಹೂ ಗಿಡಗಳನ್ನು ಬೆಳೆಸಿದರು. ಹೋದೆಡೆಯೆಲ್ಲ ಕಂಡ ಹೊಸ ಬಗೆಯ ಹೂಗಿಡಗಳನ್ನು ತರುವುದು, ನೆಟ್ಟು ಪೋಷಿಸುವುದನ್ನು ಅನೇಕ ವರ್ಷಗಳಿಂದ ವರ್ಷಗಳಿಂದ ಮಾಡುತ್ತ ಬಂದರು. ಮನೆಯ ಆವರಣದಲ್ಲಿ ಹೂವಿನ ಗಿಡಗಳೇ ತುಂಬಿರುವುದನ್ನು ಕಂಡ ಕೆಲವರು, ಹೂ ಗಿಡಗಳದ್ದೇ ನರ್ಸರಿ ಏಕೆ ಮಾಡಬಾರದು. ಆಸಕ್ತಿಯ ಕೆಲಸ ಆದಾಯ ತರಬಹುದೆಂಬ ಸಲಹೆ ನೀಡಿದರು. ಬಿಡುವಿನ ಸಮಯ ಬಳಸಿ ಸಾಧ್ಯವಿರುವಷ್ಟು ಮಾಡಿದಲ್ಲಿ ಇದೊಂದು ಸಣ್ಣ ಉದ್ಯಮವಾಗಿಯೂ ರೂಪುಗೊಳ್ಳಬಹುದು ಎಂಬ ಮಾತನ್ನು ಅನುಭವಸ್ಥರೊಬ್ಬರು ಹೇಳಿದರು.
ಈ ಪ್ರೇರಣೆಯಿಂದ 7-8 ವರ್ಷಗಳ ಹಿಂದೆ ಸವಿತಾ ಗಾಂವ್ಕರ ಇನ್ನಷ್ಟು ಹೊಸ ಹೊಸ ಬಗೆಯ ಹೂಗಿಡಗಳನ್ನು ಸಂಪಾದಿಸಿ ಬೆಳೆಸತೊಡಗಿದರು. ಪುಷ್ಪಮೇಳಗಳಿಗೆ ಹೋಗಿ, ತಜ್ಞರು, ಅನುಭವಿ ಕೃಷಿಕರಿಂದ ಮಾಹಿತಿ ಪಡೆದುಕೊಂಡರು. ಹವ್ಯಾಸವನ್ನೇ ಸಣ್ಣ ಉದ್ದಿಮೆಯಾಗಿ ಮಾಡಿ ಸ್ವಾವಲಂಬಿ ಜೀವನಕ್ಕೆ ನಿದರ್ಶನರಾಗಿದ್ದಾರೆ.
ಮನೆಯಂಗಳದಲ್ಲೇ ಇರುವ ನೂರಾರು ಅಡಿ ಜಾಗದಲ್ಲಿ ಸುಮಾರು 70 ಜಾತಿಯ ನೀರುಸೋನೆ, ಬ್ಲೋಸಮ್, ವೆಲ್ವೆಟ್, ಹ್ಯಾಂಗಿಂಗ್ ಪಾಟ್ಸ್, ಝೀರೇನಿಯಂ ಸೇವಂತಿಗೆ, ಹೊಸತಳಿಯಾದ ಲೇಡಿ ಲೇಟರ್ ಹಾಗೂ 20 ಬಗೆಯ ಶೋ ಗಿಡ, 15 ಜಾತಿಯ ದಾಸವಾಳ, 6 ಜಾತಿಯ ಕೋಟೆ ಹೀಗೆ ಅನೇಕ ಹಳೆ ಹಾಗೂ ಹೊಸತಳಿಗಳ ಹೂವಿನ ಸಸಿಗಳನ್ನು ಬೆಳೆಸುತ್ತಿದ್ದಾರೆ.
ಇವನ್ನು ಕೇವಲ ಸಾವಯವದ ಮೂಲಕ ಬೆಳೆಸುತ್ತಿರುವುದು ವಿಶೇಷ. ತಾಲೂಕಿನ ಅಲ್ಲಲ್ಲಿ ನಡೆಯುವ ಕೃಷಿ ಸಂಬಂಧಿತ ಕಾರ್ಯಕ್ರಮ, ಪ್ರದರ್ಶನಗಳಲ್ಲಿ ಹೂಗಿಡಗಳ ಪ್ರದರ್ಶನದ ಜತೆ, ಆಸಕ್ತರಿಗೆ ಈ ಕುರಿತು ಮಾಹಿತಿ, ಮಾರ್ಗದರ್ಶನ ನೀಡುತ್ತಾರೆ.
ಇಷ್ಟೊಂದು ಬಗೆಯ ಹೂವಿನ ಗಿಡಗಳನ್ನು ಬೆಳೆಯುತ್ತಿರುವುದು ತಾಲೂಕಿನಲ್ಲಿ ಅಪರೂಪದ ಕೃಷಿ ಎನಿಸಿಕೊಂಡಿದೆ. ಪ್ರತಿನಿತ್ಯ ಬಿಡುವಿಲ್ಲದೇ ನೂರಾರು ಜನ ಹೂವಿನ ಗಿಡಗಳನ್ನು ನೋಡಲು, ಖರೀದಿಸಲು ಬರುತ್ತಾರೆ. ಈ ಕೃಷಿಯನ್ನು ಇನ್ನಷ್ಟು ಆಸಕ್ತಿಯಿಂದ ತೊಡಗಿಸಿಕೊಂಡು, ಸಾಧಿಸುವ ಛಲ ಸವಿತಾ ಅವರದು.
ಜೀವನೋಪಾಯಕ್ಕಾಗಿ ಅಲ್ಲದಿದ್ದರೂ ಈ ಹವ್ಯಾಸವನ್ನು ಹೀಗೆ ಮುಂದುವರಿಸಿ, ಸಣ್ಣ ಪ್ರಮಾಣದಲ್ಲಿ ಉದ್ಯಮವಾಗಿ ಬೆಳೆಸಿದ ಖುಷಿಯಿದೆ. ಕುಟುಂಬದವರ ಸಹಕಾರ, ಪ್ರೋತ್ಸಾಹ ಇನ್ನಷ್ಟು ಆಸಕ್ತಿಯಿಂದ ಇದರಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ. ಸವಿತಾ ಗಾಂವ್ಕರ, ಜಮಗುಳಿ