ಐಚ್ಛಿಕ ಕನ್ನಡ ಓದುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ

10KMD-1
ಭಾರತೀ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.
Published on

ಕೆ.ಎಂ.ದೊಡ್ಡಿ: ಇತ್ತೀಚಿನ ದಿನಗಳಲ್ಲಿ ಐಚ್ಛಿಕ ಕನ್ನಡ ಓದುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಮದ್ದೂರಿನ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಕೆ.ಬಿ.ನಾರಾಯಣ ಬೇಸರ ವ್ಯಕ್ತಪಡಿಸಿದರು.

ಭಾರತೀ ಕಾಲೇಜು ಕನ್ನಡ ವಿಭಾಗ, ಸ್ನಾತಕ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ, ಅಂತಿಮ ಬಿಎ ಐಚ್ಛಿಕ ಕನ್ನಡ 6ನೇ ಚತುರ್ಮಾಸದ ಪಠ್ಯ ಪರಾಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಐಚ್ಛಿಕ ಕನ್ನಡ ಪದವಿ ಪಡೆದರೆ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶವಿದೆ. ಅಲ್ಲದೆ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಲಭವಾಗಿ ಐಚ್ಛಿಕ ಕನ್ನಡ ವಿದ್ಯಾರ್ಥಿಗಳೇ ಉತ್ತೀರ್ಣರಾಗುತ್ತಿದ್ದು, ಕನ್ನಡದ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಯ ಪ್ರಮುಖವಾದ ಗುಣಲಕ್ಷಣ ಎಂದರೆ ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಒಂದು ವಿಷಯವನ್ನು ತೆಗೆದುಕೊಂಡಾಗ ಯಾವುದು ಸರಿ. ತಪ್ಪು ಅದನ್ನು ಪರಾಮರ್ಶೆ ಮಾಡಬೇಕು ಎಂದು ಸಲಹೆ ನೀಡಿದರು.

ಜ್ಞಾನದ ವಿಸ್ತಾರ ಅಪಾರವಾದದ್ದು, ಕನ್ನಡ ಸಿರಿ, ಕನ್ನಡ ಸಾಹಿತ್ಯ ಪರಿಷತ್ ನಿಘಂಟು, ಬ್ಲಾಗ್, ಮೊದಲಾದ ತಂತ್ರಜ್ಞಾನಗಳ ಮೂಲಕ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತೀ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಸ್ ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಕಡೆಗೆ ಹೆಚ್ಚು ಗಮನ ನೀಡಿದರೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಸಾಕಷ್ಟು ಕುತೂಹಲವಿದ್ದರೂ ಭಾಷೆಯ ಬಗ್ಗೆ ಒಲವು ಹೊಂದಿರಬೇಕು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ ಮಾತನಾಡಿ, ಯಾವುದೇ ವಿದ್ಯಾರ್ಥಿ ಯಾವ ಕೋರ್ಸ್ ಓದಿದರೂ ಸಾಹಿತ್ಯ ಬೇಕು. ಸಾಹಿತ್ಯ ಬದುಕನ್ನು ಹೇಗೆ ನಡೆಸಬೇಕೆಂದು ತಿಳಿಸುತ್ತದೆ. ಉದ್ಯೋಗದಲ್ಲಿ ಕಾರ್ಯ ನಿರತರಾದಾಗ ನೆಮ್ಮದಿಯ ಜೀವನಕ್ಕಾಗಿ ಸಾಹಿತ್ಯ ಅಧ್ಯಯನ ಮಾಡಬೇಕು ಸಾಹಿತ್ಯ ಅಂದ್ರೆ ಬದುಕಾಗಿದ್ದು ಅದೇ ಜೀವನದ ಮಾರ್ಗವನ್ನು ತಿಳಿಸುತ್ತದೆ ಎಂದರು.

ಇಂದಿನ ವಿದ್ಯಾರ್ಥಿಗಳು ಸರಿಯಾದ ಕ್ರಮದಲ್ಲಿ ತಾಳ್ಮೆಯಿಂದ ಕೇಳಿಸಿಕೊಳ್ಳುವುದಿಲ್ಲ, ಅಲ್ಲದೆ ಕೈ ಬರವಣಿಗೆ ಬಿಟ್ಟು ಇಂದು ಜೆರಾಕ್ಸ್‌ಗೆ ಜೋತು ಬಿದ್ದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಂಗವಾಗಿ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವಿದ್ವಾಂಸರಾಗಿ ಆಗಮಿಸಿದ ಮಣಿಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬರಗೂರಪ್ಪ ಅವರು ಮಧ್ಯಕಾಲಿನ ಕನ್ನಡ ಸಾಹಿತ್ಯದಲ್ಲಿ ವೈಚಾರಿಕ ನೆಲೆಗಳು ಎಂಬ ವಿಷಯ ಮಂಡಿಸಿದರು.

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಡಿ.ಸುಂದರಿ ಅವರು, ಶಬ್ದಮಣಿ ದರ್ಪಣಂ: ಆಧುನಿಕ ಚಿಂತನೆಗಳು ಎಂಬ ವಿಷಯವನ್ನು ಮಂಡಿಸಿದರು.

ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಎಚ್.ಶ್ರೀ ಮೂರ್ತಿ ಅವರು ಶರೀಫರ ತತ್ವಪದಗಳು ಮತ್ತು ವಸಾಹತು ಪ್ರಜ್ಞೆ ಎಂಬ ವಿಷಯ ಮಂಡಿಸಿದರು.

ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನೆ ಕೇಂದ್ರದ ಸಂಯೋಜಕ ಡಾ.ಎಚ್.ಎಂ.ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿವಿಧ ಅಂತಿಮ ಬಿ.ಎ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ಮಾಡಲಾಯಿತು. ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ.ಎಂ.ಪಿ.ತೇಜೇಶ್ ಕುಮಾರ್, ಡಾ.ಪಿ.ಪುನೀತ್, ಸಂಚಾಲಕರಾದ ಮಮತಾನಾಗ್, ಡಾ. ಜಿ.ಎಂ. ಲಕ್ಷ್ಮೀ, ಡಿ.ಎಲ್.ಸರಿತಾ, ಬಿ.ಡಿ.ಮಹೇಶ್, ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಾಗರಾಜು, ಮಂಡ್ಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಉಮೇಶ್, ಮಣಿಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಶಾರದಮ್ಮ ಮತ್ತಿತರರು ಹಾಜರಿದ್ದರು.

-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net