

ಕೂಡಲಸಂಗಮ: ಇಂದು ಧರ್ಮಕ್ಕೆ ದುಡಿಯುವ ಸಾಧಕರ ಸಂಖ್ಯೆ ಕಡಿಮೆ ಇದ್ದು ಅಧಿಕವಾಗಬೇಕಿದೆ. ಪ್ರವಚನದ ಮೂಲಕ ಸಾಧಕರು ಯುವಕರನ್ನು ಪರಿವರ್ತಿಸುವ ಕಾರ್ಯ ಮಾಡಬೇಕೆಂದು ಬೀದರ್ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ನಡೆದ 38ನೇ ಶರಣಮೇಳದ ಮೊದಲ ದಿನದ ರಾಷ್ಟ್ರೀಯ ಬಸವ ದಳದ 34ನೇ ಅಧಿವೇಶನ ಹಾಗೂ ಯುವ ಶಕ್ತಿಯ ಕರ್ತವ್ಯ ಚಿಂತನಾ ಗೋಷ್ಠಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಂಗಮಮೂರ್ತಿಗಳು ಜೀವನದಲ್ಲಿ ತ್ಯಾಗ, ಸೇವೆ ಅಳವಡಿಸಿಕೊಳ್ಳವ ಅಗತ್ಯ ಇದೆ. ಆಧುನಿಕ ಸಾಮಾಜಿಕ ಜಾಲತಾಣಗಳಿಂದ ಇಂದಿನ ಯುವ ಜನಾಂಗ ಹಾದಿ ತಪ್ಪುತ್ತಿದ್ದು, ಅವರನ್ನು ತಿದ್ದುವ ಕಾರ್ಯವನ್ನು ಮಠಾಧೀಶರು, ರಾಷ್ಟ್ರೀಯ ಬಸವ ದಳ ಮಾಡಬೇಕು.
ರಾಷ್ಟ್ರೀಯ ಬಸವ ದಳ ಆಧ್ಯಾತ್ಮಿಕ, ಸಾಮಾಜಿಕ, ಧಾರ್ಮಿಕ ಸಂಘಟನೆಯಾಗಿದ್ದು, ದೇಶಾದ್ಯಂತ ಉತ್ತಮ ಕಾರ್ಯ ಮಾಡುತ್ತಿದೆ. ಬಸವಾದಿಶರಣರ ತತ್ವಗಳನ್ನು ನಾಡಿಗೆ ಪರಿಚಯಿಸುವ ಕಾರ್ಯ ಮಾಡಿದೆ ಎಂದರು.
ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಧರ್ಮ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಕಟ್ಟಿದ ರಾಷ್ಟ್ರೀಯ ಬಸವ ದಳ ಶರಣ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿದೆ. ಇಂದು ಭಕ್ತರಿಗೆ ಅಗತ್ಯವಾದ ಸಂಸ್ಕಾರ ಕೊಡುವ ಕಾರ್ಯವನ್ನು ಮಾಡುತ್ತಿದೆ ಎಂದರು.
ರಾಷ್ಟ್ರೀಯ ಬಸವ ದಳದ ರಾಜಾಧ್ಯೆಕ್ಷ ಕೆ. ವಿರೇಶ ಮಾತನಾಡಿ, ರಾಷ್ಟ್ರೀಯ ಬಸವ ದಳದ ಮುಖ್ಯಗುರಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದಾಗಿದೆ. ಎಲ್ಲ ಬಸವಪರ ಸಂಘಟನೆಗಳೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಈ ವರ್ಷ ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಬಸವ ದಳ ಅಧಿವೇಶನ ಮಾಡಿ ಸಂಘಟನೆ ಬಲಪಡಿಸಲಾಗುವುದು. ಜನವರಿ ಕೊನೆಯ ವಾರ ಬಳ್ಳಾರಿ, ೆಬ್ರವರಿಯಲ್ಲಿ ಚಿತ್ರದುರ್ಗ, ಮಾರ್ಚ್‌ನಲ್ಲಿ ಕೊಪ್ಪಳ, ಎಪ್ರಿಲ್‌ನಲ್ಲಿ ಶಿವಮೊಗ್ಗದಲ್ಲಿ ಮಾಡಲು ತೀರ್ಮಾನಿಸಿದೆ. ಉಳಿದ ಜಿಲ್ಲೆಯನ್ನು ನಂತರ ಘೋಷಿಸಲಾಗುವುದು ಎಂದರು.
ಮಹಾರಾಷ್ಟ್ರದ ಬಸವ ಬ್ರಿಗೇಡ್ ಅಧ್ಯಕ್ಷ ಅವಿನಾಶ ಬೋಸಿಕರ ಉದ್ಘಾಟಿಸಿದರು.
ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಗಂಗಾದೇವಿ, ಮಾತೆ ಜ್ಞಾನೇಶ್ವರಿ, ಮಾತೆ ವಿಜಯಾಂಬಿಕೆ, ಬಸವಕುಮಾರ ಸ್ವಾಮೀಜಿ ಇದ್ದರು. ಬೆಂಗಳೂರು ರಾಷ್ಟ್ರೀಯ ಬಸವ ದಳದ ಪಂಚಾಕ್ಷರಯ್ಯ ಹಿರೇಮಠ, ಬೀದರ ರಾಷ್ಟೀಯ ಬಸವ ದಳದ ನಾಗಶೆಟ್ಟಿ ಶಟಗಾರ, ಧಾರವಾಡ ಯುವ ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಕರಿಬಸಪ್ಪ ಕೋರಿಶೆಟ್ಟರ, ತೆಲಂಗಾಣ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಶಂಕರಪ್ಪ ಪಾಟೀಲ ಸಂಘಟನೆಯ ಕುರಿತು ಮಾತನಾಡಿದರು.
ಪ್ರಶಸ್ತಿ ಪ್ರಧಾನ : ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಕೂಡಲಸಂಗಮದ ಎಲ್.ಎಂ. ಪಾಟೀಲ (ಶರಣ ದಾಸೋಹ ರತ್ನ), ಬೆಂಗಳೂರು ರಾಷ್ಟ್ರೀಯ ಬಸವ ದಳದ ದೇವಿಕಾ ಶರಣಪ್ಪ (ಶರಣ ಸೇವಾ ರತ್ನ), ಗೋಕಾಕ ರಾಷ್ಟ್ರೀಯ ಬಸವ ದಳದ ಕಮಲಕ್ಕ ಚೌಧರಿ(ಶರಣ ರತ್ನ), ಕೊಪ್ಪಳ ರಾಷ್ಟ್ರೀಯ ಬಸವ ದಳದ ಬಸವನಗೌಡ ಪಾಟೀಲ ಅವರಿಗೆ ಶರಣ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಇಂದು ಶರಣ ಮೇಳದಲ್ಲಿ: ಶರಣ ಮೇಳದ 2ನೇ ದಿನ ಸೋಮವಾರ ಬೆಳಗ್ಗೆ 10.30ಕ್ಕೆ 38ನೇ ಶರಣ ಮೇಳದ ಉದ್ಘಾಟನೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾಡುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಕಾರ್ಮಿಕ ಸಚಿವ ಸಂತೋಷ ಲಾಡ, ಶಾಸಕ ವಿಜಯಾನಂದ ಕಾಶಪ್ಪನವರ, ಲೋಕಸಭಾ ಸದಸ್ಯ ಸಾಗರ ಖಂಡ್ರೆ ಆಗಮಿಸುವರು. ಸಾಣೇಹಳ್ಳಿ ತರಳಬಾಳು ಬಹನ್ಮಠದ ಪಂಡಿತರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
ಸಂಜೆ 6 ಗಂಟೆಗೆ ಬಸವ ಧರ್ಮ ಪೀಠದ 33ನೇ ಪೀಠಾರೋಹಣ, ಬಸವಾದಿ ಶರಣರ ಸ್ವಾಭಿಮಾನದ ಬದುಕು ಚಿಂತನಾ ಗೋಷ್ಠಿಯನ್ನು ರಾಜ್ಯ ಲೋಕಾಯುಕ್ತ ಬಿ.ಎಸ್. ಪಾಟೀಲ ಉದ್ಘಾಟಿಸುವರು. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆಗಮಿಸುವರು.