ಶೇ.13 ರಷ್ಟು ಏರಿಕೆಯಾದ ರಸ್ತೆ ಅಪಘಾತದ ಸಂಖ್ಯೆ: ಕಳವಳ ವ್ಯಕ್ತಪಡಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

New Project
Published on

ಬೆಂಗಳೂರು: ರಸ್ತೆ ಅಪಘಾತಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಬದಲಾಗಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. 2021 ರಿಂದ 2022 ಕ್ಕೆ ಹೋಲಿಕೆ ಮಾಡಿ ನೋಡಿದ್ದಾಗ ಅಪಘಾತಗಳ ಸಂಖ್ಯೆಯಲ್ಲಿ ಶೇ.13 ರಷ್ಟು ಏರಿಕೆಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗಿದ್ದ ‘‘ವೇಗವನ್ನು ಕಡಿಮೆ ಮಾಡಲು ಸಮೂಹ ಮಾಧ್ಯಮಗಳ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ರಸ್ತೆ ಸುರಕ್ಷತೆ ಬಗ್ಗೆ ಪ್ರತಿ ವರ್ಷ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತದೆ. ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಅಪಘಾತಗಳ ಪ್ರಮಾಣ ಕಡಿಮೆ ಆಗುತ್ತಿಲ್ಲ. ಅಪಘಾತಗಳ ಪ್ರಮಾಣ ಕಡಿಮೆ ಮಾಡಬೇಕು ಎಂದು ಅಂತರಾಷ್ಟ್ರಿಯ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಜಾಸ್ತಿಯಾಗತ್ತಿದ್ದು ಇದು ಕಳವಳ ವ್ಯಕ್ತ ಪಡಿಸುವಂತಹ ವಿಚಾರವಾಗಿದೆ ಎಂದರು.
ನಮ್ಮ ರಾಜ್ಯದಲ್ಲಿ ೨೦೨೨ ರಲ್ಲಿ ೩೫,೫೫೦ ರಸ್ತೆ ಅಪಘಾತಗಳು ಆಗಿದೆ. ಅದರಲ್ಲಿ ೧೦೭೨೩ ಮಂದಿ ಮೃತಪಟ್ಟಿದ್ದಾರೆ. ೪೨,೧೩೫ ಮಂದಿ ಮಾರಣಾಂತಿಕವಾದ ಗಾಯಗಳಾಗಿವೆ. ೨೦೨೧ ರಿಂದ ೨೦೨೨ ಕ್ಕೆ ಹೋಲಿಕೆ ಮಾಡಿ ನೋಡಿದ್ದಾಗ ಶೇ.೧೩ ರಷ್ಟು ಏರಿಕೆಯಾಗಿದೆ. ಅದೇ ರೀತಿ ರಾಷ್ಟ್ರೀಯ ಮಟ್ಟದಲ್ಲಿಯೂ ೪,೬೧,೩೧೨ ರಸ್ತೆ ಅಪಘಾತಗಳಾಗಿವೆ. ೧೦,೬೮೪,೯೧ ಮಂದಿ ಸಾವನ್ನಪ್ಪಿದ್ದಾರೆ. ೪,೪೩,೩೬೬ ಮಂದಿ ಗಾಯಗೊಂಡಿದ್ದಾರೆ. ದಿನೇ ದಿನೇ ಅಪಘಾತಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ರಸ್ತೆ ಸುರಕ್ಷತೆ ಬಗ್ಗೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ನಿರಂತರವಾಗಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ವಾಹನ ಸವಾರರ ಸಹಕಾರ ಇಲ್ಲವಾದರೆ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು.ಆದರೂ ಮೊಬೈಲ್ ಬಳಕೆ ಮಾಡಲಾಗುತ್ತಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಆದರೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಾರೆ. ಗುಂಡಿಗಳಿಂದ ಅಂದರೆ ರಸ್ತೆ ಸಮರ್ಪಕವಾಗಿ ಇಲ್ಲದೆ ಇರುವುದರಿಂದಲು ಕೆಲ ಅಪಘಾತಗಳು ಆಗಿವೆ. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ನಿಯಮವಿದೆ. ಆದರೆ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಕಾಟಾಚಾರಕ್ಕೆ ಅರ್ಧ ಹೆಲ್ಮೆಟ್ ಬಳಸಿ ವಾಹನ ಚಲಾಯಿಸುತ್ತಾರೆ. ಪ್ರತಿಯೊಬ್ಬರು ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನ ಸವಾರರು ಜವಬ್ಧಾರಿಯುತವಾಗಿ ವಾಹನ ಚಲಾಯಿಸಿದ್ದಾಗ ಮಾತ್ರ ಅಪಘಾತಗಳ ಪ್ರಮಾಣ ಕಡಿಮೆಯಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ಮಾಡುವ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜೆ.ಪುರುಷೋತ್ತಮ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಏನಿದು ಅಭಿಯಾನ?
ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ತುಮಕೂರು ಜಿಲ್ಲೆಯ ಕೆ.ಎನ್.ಪುರುಷೋತ್ತಮ ಅವರ ಜೀವನದಲ್ಲಿ ಬಂದ ಕಷ್ಟದ ದಿನಗಳನ್ನು ಆಧರಿಸಿ ಬ್ಲೂಮ್‌ಬರ್ಗ್ ಫಿಲಾಂತ್ರಪೀಸ್ ಸಂಸ್ಥೆಯ ಸಹಯೋಗದೊಂದಿಗೆ ತಯಾರಿಸಲಾದ ವಿಡಿಯೋ ತುಣುಕನ್ನು ನಾಲ್ಕು ವಾರಗಳ ಕಾಲ ಕನ್ನಡದ ಸರ್ಕಾರಿ ಮತ್ತು ಖಾಸಗಿ ವಾಹಿನಿಯಲ್ಲಿ ಮತ್ತು ಆಡಿಯೋವನ್ನು ರೇಡಿಯೋದಲ್ಲಿ ಹಾಗೂ ರಾಜ್ಯದ ಸುಮಾರು 600 ಚಲನಚಿತ್ರ ಪರದೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಅದೇ ರೀತಿ ಸುಮಾರು 15 ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟ ಮಾಡುವ ಮೂಲಕ ‘‘ಚಾಲನೆ ಮಾಡುವಾಗ ವೇಗದ ಮಿತಿಯನ್ನು ಅನುಸರಿಸಿ’ ಎಂದು ಜಾಗೃತಿ ಮೂಡಿಸಲಾಗುತ್ತದೆ.

ದ್ವಿಚಕ್ರ ವಾಹನ ಸವಾರರು ಟೋಪಿ ಮಾದರಿಯ ಅರ್ಧ ಹೆಲ್ಮೆಟ್ ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಲು ಅರ್ಧ ಹೆಲ್ಮೆಟ್ ತಯಾರಿಸುವ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಜಪ್ತಿ ಮಾಡಿಕೊಂಡು ಸೂಕ್ತ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net