

ಚಿತ್ರದುರ್ಗ: ಹೊಸಹಟ್ಟಿ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ಆರೋಗ್ಯದಲ್ಲಿ ಏರುಪೇರು ಉಂಟಾದರೆ ಕೂಡಲೇ ಚಿಕಿತ್ಸೆ ಪಡೆಯಿರಿ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು.
ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಸ್ಪತ್ರೆಯಲ್ಲಿ 8, ಬಸವೇಶ್ವರ ಆಸ್ಪತ್ರೆಯಲ್ಲಿ ಒಬ್ಬರು, ಹೊಸಹಟ್ಟಿಯಲ್ಲಿ ಮೂವರು, ಭಾನುವಾರ ಮತ್ತಿಬ್ಬರು ಅಸ್ವಸ್ಥರಾಗಿದ್ದು, 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಪ್ರಕರಣ ಕಂಡು ಬಂದಿಲ್ಲ. ಎಲ್ಲರೂ ಗುಣವಾಗುತ್ತಿದ್ದು ಯಾವುದೇ ತೊಂದರೆ ಇಲ್ಲ ಎಂದು ಡಿಎಚ್‌ಒ ಡಾ.ಆರ್.ರಂಗನಾಥ್ ಮಾಹಿತಿ ನೀಡಿದರು.
ದುರಸ್ತಿಗೆ ಸೂಚನೆ: ಗ್ರಾಮದಲ್ಲಿನ ತೊಟ್ಟಿಗಳು, ಪೈಪ್‌ಲೈನ್‌ಗಳಲ್ಲಿ ಎಲ್ಲಿಯಾದರೂ ಸೋರಿಕೆ ಕಂಡು ಬಂದಲ್ಲಿ ತ್ವರಿತವಾಗಿ ದುರಸ್ತಿ ಕೈಗೊಳ್ಳಿ. ನೀರು ಪೂರೈಕೆಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಿ. ಸ್ವಚ್ಛತೆಗೆ ಆದ್ಯತೆ ನೀಡಿ. ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತನ್ನಿ ಎಂದು ಇಒ, ಪಿಡಿಒಗೆ ಶಾಸಕರು ಸೂಚನೆ ನೀಡಿದರು.
ಕ್ಷೇತ್ರದ ಜನರ ಆರೋಗ್ಯ ಕಾಪಾಡುವುದು ನನ್ನ ಜವಾಬ್ದಾರಿಯಾಗಿದ್ದು, ಹೆಚ್ಚುವರಿ ಆರೋಗ್ಯ ಸೌಲಭ್ಯ ಬೇಕಾದರೆ ನನಗೆ ತಿಳಿಸಿದರೆ ಕೂಡಲೇ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾಸ್ಪತ್ರೆ, ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.
ಉಪವಿಭಾಗಾಧಿಕಾರಿ ಕಾರ್ತಿಕ್, ತಹಸೀಲ್ದಾರ್ ನಾಗವೇಣಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೇವರಾಜ್, ಟಿಎಚ್‌ಒ ಡಾ.ಬಿ.ವಿ.ಗಿರೀಶ್, ಗ್ರಾಪಂ ಅಧ್ಯಕ್ಷೆ ಮಂಗಳಾ, ಉಪಾಧ್ಯಕ್ಷೆ ಸುಧಾರಾಣಿ ಇತರರಿದ್ದರು.
ಮುಖ್ಯಾಂಶಗಳು: ಹನ್ನೊಂದು ನೀರಿನ ಮಾದರಿ ಪ್ರಯೋಗಾಲಯಕ್ಕೆ ರವಾನೆ. ಈವರೆಗೆ 7 ಮಂದಿ ಅಸ್ವಸ್ಥರಿಂದಲೂ ಮಾದರಿ ಸಂಗ್ರಹ