

ತುಮಕೂರು: ಮುಂಬೈನಿಂದ ಆಗಮಿಸಿದ್ದ ತುಮಕೂರು ನಗರದ ಅಜಾದ್ ನಗರದ 58 ವಯಸ್ಸಿನ ವ್ಯಕ್ತಿಗೆ ಕರೊನಾ ಸೋಂಕು ದೃಢವಾಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೇರಿದೆ.
ಚಾಲಕನಾಗಿರುವ ಪಿ-1561 ಸೋಮವಾರ ಸಂಜೆ ಮುಂಬೈನಿಂದ ನಗರದ ಆಜಾದ್‌ನಗರದ ತನ್ನ ಮನೆಗೆ ಆಗಮಿಸಿ ಬಡವಣೆಯಲ್ಲಿ ಓಡಾಡುತ್ತಿದ್ದ ಎನ್ನಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢವಾಗಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಆತನ ಪತ್ನಿ ಮತ್ತು 4 ಮಕ್ಕಳನ್ನು ಏಕಾಂಗಿ ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಸೋಂಕಿತ ವ್ಯಕ್ತಿ ಹಾಗೂ ಅವರ ಕುಟುಂಬ ಸದಸ್ಯರು ಓಡಾಡಿರುವ ಸ್ಥಳ, ಸಂಪರ್ಕಿಸಿರುವ ಜನರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16 ಆಗಿದ್ದು, ಐವರು ಗುಣಮುಖರಾಗಿ ಕ್ವಾರಂಟೈನ್‌ನಲ್ಲಿದ್ದಾರೆ. 9 ಜನರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮುಂಬೈ ಸೇರಿ ನೆರೆಯ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುತ್ತಿರುವವರ ಮೇಲೆ ನಿಗಾ ವಹಿಸಿರುವ ಜಿಲ್ಲಾಡಳಿತ ಅವರನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಿದೆ.
ಗಡಿಯಲ್ಲಿ ಚೆಕ್‌ಪೋಸ್ಟ್: ಹಾಸನ, ಮಂಡ್ಯ ಜಿಲ್ಲೆಯಿಂದ ಜಿಲ್ಲೆಗೆ ಆಗಮಿಸುವವರ ಆರೋಗ್ಯ ತಪಾಸಣೆ ನಡೆಸಲು ಗಡಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ಪೊಲೀಸರು, ಆರೊಗ್ಯ ಇಲಾಖೆ ಸಿಬ್ಬಂದಿ ಹೆಚ್ಚು ನಿಗಾವಹಿಸಿ ಕೆಲಸ ಮಾಡುತ್ತಿದ್ದಾರೆ. ಗಡಿಭಾಗದ ಹಳ್ಳಿಗಳಲ್ಲಿ ಹೊರಗಿನಿಂದ ಬಂದವರ ಬಗ್ಗೆ ಮಾಹಿತಿ ನೀಡಲು ವಿಲೇಜ್ ಟಾಸ್ಕ್‌ಪೋರ್ಸ್‌ಗಳಿಗೆ ತಿಳಿಸಲಾಗಿದೆ.
ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ಜಿಲ್ಲೆಗೆ ಹೊಂದಿಕೊಂಡಿರುವ ತುಮಕೂರು ಜಿಲ್ಲೆಯ ಗಡಿಯಲ್ಲಿ 5 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಹೆಚ್ಚು ನಿಗಾವಹಿಸಿ ಜನರ ವಿಳಾಸ ಸಂಗ್ರಹಿಸಲು ಅಧಿಕಾರಿ, ಸಿಬ್ಬಂದಿಗೆ ಸೂಚಿಸಲಾಗಿದೆ. ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ಅಧೀಕ್ಷಕ