ಜಿಲ್ಲೆಯಲ್ಲಿ 13 ಕ್ಕೇರಿದ ಸಾವಿನ ಸಂಖ್ಯೆ

8HSN2
Published on

ಹಾಸನ: ಸಮುದಾಯಕ್ಕೆ ಹರಡಿರುವ ಕರೊನಾ ಸೋಂಕು ದಿನೇ ದಿನೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದ್ದು, ಬುಧವಾರ ಹೊಸದಾಗಿ 26 ಪ್ರಕರಣಗಳು ದಾಖಲಾಗಿವೆ. ಜತೆಗೆ ಹಾಸನ ತಾಲೂಕಿನ ಇಬ್ಬರು ಮೃತಪಟ್ಟಿದ್ದು, ಇಲ್ಲಿವರೆಗೆ 13 ಜನರು ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ರಕ್ತದೊತ್ತಡ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ನಗರ ಹೊರವಲಯದ 48 ವರ್ಷದ ಮಹಿಳೆ ಬುಧವಾರ ಮುಂಜಾನೆ 5.25ಕ್ಕೆ ಕೋವಿಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಜು.7ರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕರೊನಾ ದೃಢಪಟ್ಟಿದ್ದರಿಂದ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿ ಮಧ್ಯಾಹ್ನ 2 ಗಂಟೆಗೆ ಪ್ರಾಣ ಬಿಟ್ಟರು. ಜು.6 ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಕರೊನಾ ಇರುವುದು ತಿಳಿದು ಬಂದಿತ್ತು.

26 ಹೊಸ ಪ್ರಕರಣ: ಇಬ್ಬರು ಪತ್ರಕರ್ತರು ಸೇರಿ ಹಾಸನದ 15, ಆಲೂರು 4, ಅರಕಲಗೂಡು 2, ಬೇಲೂರು 1, ಚನ್ನರಾಯಪಟ್ಟಣ 2, ಸಕಲೇಶಪುರ ತಾಲೂಕಿನ ಇಬ್ಬರು ಸೇರಿ 26 ಜನರಲ್ಲಿ ಹೊಸದಾಗಿ ಕರೊನಾ ಕಾಣಿಸಿಕೊಂಡಿದೆ.

ಕಳೆದ ಶನಿವಾರ ಸ್ವಾೃಬ್ ಟೆಸ್ಟ್‌ಗೆ ಒಳಗಾದ ಪತ್ರಕರ್ತರ ವರದಿ ಬುಧವಾರ ಬೆಳಗ್ಗೆ ತಿಳಿದಿದ್ದು ಸೋಂಕಿತ ಇಬ್ಬರನ್ನೂ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನರು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವಾರ ಜಿಲ್ಲಾ ಪತ್ರಕರ್ತರ ಸಂಘದ ಕಚೇರಿ ಹಾಗೂ ವಾರ್ತಾ ಭವನ ಬಂದ್ ಮಾಡಲಾಗಿದೆ.

ಜಿಲ್ಲೆಯಲ್ಲಿ 594 ಪ್ರಕರಣಗಳು ಬೆಳಕಿಗೆ ಬಂದಿದ್ದು 326 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 206 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ಕುಮಾರ್ ಪತ್ರಿಕೆಗೆ ತಿಳಿಸಿದರು.

ಎಸ್‌ಡಿಎಂನಲ್ಲಿ ಚಿಕಿತ್ಸೆಗೆ ವ್ಯವಸ್ಥೆ: ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, ನಗರದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ 200 ಹಾಸಿಗೆಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಜಿಲ್ಲಾಧಿಕಾರಿ ಆರ್.ಗಿರೀಶ್ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದು, ಕೋವಿಡ್-19 ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದರೆ ಎಸ್‌ಡಿಎಂನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭವಾದರೆ ಖಾಸಗಿ ವೈದ್ಯರು ಪಾಳಿ ಆಧಾರದಲ್ಲಿ ಸೇವೆಗೆ ಬರಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

15 ದಿನ ಸಲೂನ್ ಬಂದ್: ಮಾರಕ ಕರೊನಾಗೆ ಹೆದರಿರುವ ಸಲೂನ್ ಮಾಲೀಕರು ಮುಂದಿನ 15 ದಿನ ಸೇವೆ ಸ್ಥಗಿತಗೊಳಿಸಿದ್ದಾರೆ. ಜು. 11 ರಿಂದ 26ರ ವರೆಗೆ ಜಿಲ್ಲೆಯ ಎಲ್ಲ ಕ್ಷೌರದಂಗಡಿ ಬಂದ್ ಮಾಡಲಾಗುತ್ತದೆ ಎಂದು ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ರವಿಕುಮಾರ್ ತಿಳಿಸಿದ್ದಾರೆ.
ಒಬ್ಬರಿಂದ ಒಬ್ಬರಿಗೆ ಕರೊನಾ ವೇಗವಾಗಿ ಹರಡುತ್ತಿದ್ದು, ನಮ್ಮಿಂದ ಇತರರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದರು.

ಸಾವಿರ ಮಾಸ್ಕ್ ವಿತರಣೆ: ಕರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಪೊಲೀಸರು, ಆರೋಗ್ಯ ಸಿಬ್ಬಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಬುಧವಾರ ಸಾವಿರ ಮಾಸ್ಕ್, ಒಂದು ಸಾವಿರ ಸ್ಯಾನಿಟೈಸರ್ ಬಾಟಲಿ ಹಾಗೂ 1800 ತಂಪು ಪಾನೀಯ ಬಾಟಲಿಗಳನ್ನು ನೀಡಲಾಯಿತು.

ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಸಂಸ್ಥೆಯ ಪದಾಧಿಕಾರಿಗಳು ಡಿಸಿ ಆರ್.ಗಿರೀಶ್ ಅವರಿಗೆ ಸಾಮಗ್ರಿ ಹಸ್ತಾಂತರಿಸಿದರು. ಈ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ, ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಹೆಮ್ಮಿಗೆ ಮೋಹನ್, ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ನಿರ್ದೇಶಕರಾದ ಜಯೇಂದ್ರ ಕುಮಾರ್, ಮಹಾವೀರ್ ಬನ್ಸಾಲಿ, ಅಮ್ಜದ್ ಖಾನ್, ಎಚ್.ಡಿ. ಕುಮಾರ್, ಕೆ.ಟಿ ಜಯಶ್ರೀ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net