

ಹಿರೀಸಾವೆ: ರಕ್ತದಾನ ಮಾಡುವ ಮೂಲಕ ಹಲವರ ಜೀವ ಹಾಗೂ ಜೀವನವನ್ನು ಉಳಿಸಬಹುದು ಎಂದು ಹಾಸನ ಹಿಮ್ಸ್ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ನಾಗಲಕ್ಷ್ಮೀ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಾಸನದ ರಕ್ತನಿಧಿ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆ, ಗ್ರಾಮ ಪಂಚಾಯಿತಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಕ್ತದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ಬಹುತೇಕ ಸಮಯಗಳಲ್ಲಿ ರೋಗಿಗಳಿಗೆ ರಕ್ತದ ಅಗತ್ಯವಿರುತ್ತದೆ. ತಕ್ಷಣ ಒದಗಿಸಿದಲ್ಲಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದು. ಆದರೆ ಇತ್ತೀಚಿನ ದಿನಗಳಿಂದ ಅದೆಷ್ಟೇ ಶಿಬಿರಗಳು ನಡೆದರೂ ಸಹ ರಕ್ತದಾನಿಗಳು ಮುಂದೆ ಬರುವುದು ಕಡಿಮೆಯಾಗುತ್ತಿದೆ. ಕೆಲವೊಮ್ಮೆ ಅಗತ್ಯದ ವೇಳೆಯಲ್ಲಿಯೇ ಯಾವುದೇ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಸಿಗುವುದಿಲ್ಲ. ಯುವ ಸಮುದಾಯವು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ರಕ್ತದಲ್ಲಿ 8 ಬಗೆಗಳಿದ್ದು, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ವರ್ಷದಲ್ಲಿ 2-3 ಸಲ ರಕ್ತದಾನ ಮಾಡಲು ಅವಕಾಶವಿದೆ. ರಕ್ತದಾನ ಮಾಡಿದಷ್ಟು ಅಂತಹ ವ್ಯಕ್ತಿಯ ಆರೋಗ್ಯ ವೃದ್ಧಿಯಾಗಲಿದೆ ಎಂದರು.
ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಮಾತನಾಡಿ, ಹಿರೀಸಾವೆ ಗ್ರಾಮಕ್ಕೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ತಿಂಗಳಲ್ಲಿ ಹಲವು ಬಾರಿ ಅಪಘಾತಗಳು ಸಂಭವಿಸುತ್ತಿವೆ. ಅಂತಹ ಸಮಯದಲ್ಲಿ ರಕ್ತದ ಅಗತ್ಯವಿದ್ದರೂ ಸಿಗುವುದಿಲ್ಲ. ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಬೇಕು ಎಂದರು.
ಶಿಬಿರದಲ್ಲಿ 41ಜನ ರಕ್ತದಾನ ಮಾಡಿದರು. ಹಿರೀಸಾವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಬೋರಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ.ಮಹೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ರವಿಕುಮಾರ್, ಜ್ಞಾನಪ್ರಭ ಇಂಟರ್ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಎ.ಜಿ.ಪ್ರಭಾಕರ್, ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವಸ್ವಾಮಿ, ಪಿಡಿಒ ಸತೀಶ್, ಜೆಡಿಎಸ್ ಮುಖಂಡ ಎಚ್.ಬಿ.ಲೋಕೇಶ್, ಹಿಮ್ಸ್ ಹೌಸ್ ಸರ್ಜನ್ ಡಾ. ಎಚ್.ಎಸ್.ಧನುಷ್, ರಕ್ತನಿಧಿ ಸಲಹೆಗಾರ್ತಿ ಲೀಲಾವತಿ, ಪ್ರಯೋಗಾಲಯ ತಂತ್ರಜ್ಞ ಮಂಜುನಾಥ್, ಸಿಬ್ಬಂದಿ ಮಹದೇವ್, ತಮ್ಮಯ್ಯ ಮತ್ತು ಮಂಜು, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಇದ್ದರು.