ನೀಲೆಕಣಿ ಮತ್ತೆ ಹೊಂಡಗಳ ಗಣಿ!

The Nilekani is a mine of pits again!
ಶಿರಸಿಯ ನೀಲೇಕಣಿಯಲ್ಲಿ ಮಳೆಯಿಂದಾಗಿ ರಸ್ತೆ ಹೊಂಡದಲ್ಲಿ ನೀರು ನಿಂತು ಬೈಕ್ ಸವಾರರು ಸಮಸ್ಯೆ ಎದುರಿಸುತ್ತಿರುವುದು.
Published on

ಶಿರಸಿ: ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಭಾನುವಾರ ಸಂಪೂರ್ಣ ದಿನ ಮಳೆ ಸುರಿದಿದ್ದು, ರಸ್ತೆಗಳೆಲ್ಲ ಮತ್ತೆ ಮಳೆಗಾಲದ ಸ್ಥಿತಿಗೆ ತಲುಪಿವೆ. ಕೆಲವೆಡೆ ರಸ್ತೆ ಯಾವುದು, ಹೊಂಡ ಯಾವುದು ಎಂಬುದೇ ಚಾಲಕರಿಗೆ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ.

ಶಿರಸಿ ಕುಮಟಾ ರಸ್ತೆಯ ನೀಲೇಕಣಿ ಬಳಿ ಈಗ ಮತ್ತೆ ಸಂಚಾರಕ್ಕೆ ಪೇಚು ಪಡುವಂತಾಗಿದೆ. ಮಳೆಗಾಲದ ಅವಧಿಯುದ್ದಕ್ಕೂ ಸಾಕಷ್ಟು ಟ್ರೋಲ್ ಆಗಿ, ಸಂಚಾರಕ್ಕೂ ಸಮಸ್ಯೆಯಾಗಿದ್ದ ನೀಲೇಕಣಿ ಹೊಂಡಗಳು ಈಗ ಮತ್ತೆ ಮೊದಲಿನ ಸ್ಥಿತಿ ತಲುಪಿವೆ. ಗುತ್ತಿಗೆದಾರ ಆರ್‌ಎನ್‌ಎಸ್ ಕಂಪನಿ ರಸ್ತೆಯ ಒಂದು ಭಾಗದಲ್ಲಿ ಕಾಂಕ್ರೀಟ್ ಹಾಕಿ ರಸ್ತೆ ಸಿದ್ಧಪಡಿಸಿದ್ದರೂ ಇಲ್ಲಿ ಇನ್ನೂ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ. ಹೀಗಾಗಿ, ರಸ್ತೆಯ ಇನ್ನೊಂದು ಭಾಗದ ಇಕ್ಕಟ್ಟಾದ ಸ್ಥಳದಲ್ಲಿಯೇ ವಾಹನಗಳನ್ನು ದಾಟಿಸಲಾಗುತ್ತಿದೆ. ಇಲ್ಲಿ ಈಗ ಹೊಂಡಗಳೇ ತುಂಬಿದ್ದು, ಅನೇಕ ಕಡೆ ವಾಹನದ ಅರ್ಧ ಟೈರ್‌ಗಳೇ ಮುಚ್ಚುವಷ್ಟು ನೀರು ನಿಲ್ಲುತ್ತಿದೆ. ಬೈಕ್ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.

ಶಿರಸಿ ಕುಮಟಾ ರಸ್ತೆಯ ಗುತ್ತಿಗೆದಾರ ಆರ್‌ಎನ್‌ಎಸ್ ಕಂಪನಿ ಈಗ ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದೆ. ಆದರೆ, ಕಳೆದ ಮೂರು ದಿನಗಳಿಂದ ಮಳೆ ಕಾಮಗಾರಿಗೆ ಅಡಚಣೆ ತಂದೊಡ್ಡಿದೆ. ಸಿಮೆಂಟ್ ಬೆಡ್ ಹಾಕಿದ ಸ್ಥಳದಲ್ಲಿಯೇ ಗುಡ್ಡದಿಂದ ಬೃಹತ್ ಪ್ರಮಾಣದಲ್ಲಿ ನೀರು ಹರಿದುಬಂದು ಸಮಸ್ಯೆ ತಂದೊಡ್ಡಿದೆ. ಇದರಿಂದಾಗಿ ಇಲ್ಲಿ ಕಾಮಗಾರಿಯೂ ವಿಳಂಬವಾಗುತ್ತಿದೆ. ಇನ್ನು ತಾಲೂಕಿನ ಗ್ರಾಮೀಣ ಪ್ರದೇಶದ ರಸ್ತೆ ಸ್ಥಿತಿ ಮಾತ್ರ ಸಂಚಾರ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ತಾಲೂಕಿನ ಬಹುತೇಕ ಎಲ್ಲ ರಸ್ತೆಗಳೂ ಹಾಳಾಗಿವೆ. ಲೋಕೋಪಯೋಗಿ ಇಲಾಖೆ ರಸ್ತೆ ಹೊಂಡ ತುಂಬುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿತ್ತಾದರೂ ಮಳೆ ಮತ್ತೆ ಆರಂಭವಾಗಿರುವುದು ಈ ಕಾಮಗಾರಿಯನ್ನು ಮುಂದೂಡಿದೆ.

ಕೃಷಿ ಕಾರ್ಯಕ್ಕೆ ಸಮಸ್ಯೆ

ದೀಪಾವಳಿಯ ಬಳಿಕ ತಾಲೂಕಿನಲ್ಲಿ ಅಡಕೆ ಹಂಗಾಮು ಆರಂಭಗೊಳ್ಳುತ್ತದೆ. ಗೋಟಡಕೆ ಇಳಿಸುವ ಕಾರ್ಯ ಸಹ ತಾಲೂಕಿನಲ್ಲಿ ಆರಂಭಗೊಳ್ಳುತ್ತದೆ. ಆದರೆ, ಮಳೆಯ ಕಾರಣದಿಂದ ಈ ವರ್ಷ ರೈತರು ಅಡಕೆ ಇಳಿಸಲು ಹಿಂದೇಟು ಹಾಕುತ್ತಿದ್ದಾರೆ. ಗೋಟಡಕೆಯನ್ನು ಇಳಿಸಿದರೂ ಒಣಗಿಸಿ ಸಂಸ್ಕರಿಸಲು ಸಾಧ್ಯವಾಗದ ಕಾರಣ ಕೃಷಿ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ತೋಟದಲ್ಲಿ ಬಿದ್ದ ಗೋಟಡಕೆಯನ್ನು ರೈತರು ಆರಿಸಿ ತಂದು ಮನೆ ಅಂಗಳದಲ್ಲಿ ಹಾಕುತ್ತಿದ್ದರೂ ಬಿಸಿಲಿಲ್ಲದೇ ಒಣಗಿಸಲು ಸಾಧ್ಯವಾಗುತ್ತಿಲ್ಲ.

ಇನ್ನೂ ಸತ್ತಿಲ್ಲ ಉಂಬಳ !

ಪ್ರಸಕ್ತ ಸಾಲಿನಲ್ಲಿ ಮಳೆಗಾಲ ಅಧಿಕವಾದ ಕಾರಣ ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಉಂಬಳಗಳ ಕಾಟ ಜೋರಾಗಿದೆ. ಕೃಷಿ ತೋಟಕ್ಕೆ ಹೋಗಿ ಬಂದರೂ ಸಹ ಕಾಲಿಗೆ ನಾಲ್ಕಾರು ಉಂಬಳಗಳು ಹಿಡಿದಿರುತ್ತಿವೆ. ಪ್ರತಿ ವರ್ಷ ಈ ವೇಳೆ ಮಳೆ ಕಡಿಮೆಯಾದಂತೆ ನಿತ್ರಾಣಗೊಂಡು ಸಾವನ್ನಪ್ಪುತ್ತಿದ್ದ ಉಂಬಳಗಳು ಈ ವರ್ಷ ತಮ್ಮ ಸಂತಾನವನ್ನು ವೃದ್ಧಿಸಿಕೊಂಡಿದೆ. ಉಂಬಳಗಳ ಕಾಟಕ್ಕೆ ಮಲೆನಾಡ ರೈತರು ಕಂಗಾಲಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net