ಜಿಲ್ಲಾಧಿಕಾರಿಗಳ ಭೇಟಿ ಬಳಿಕ ಮುಂದಿನ ನಿರ್ಧಾರ

mlp horata
ಮಹಾಲಿಂಗಪುರದಲ್ಲಿ ತಾಲೂಕು ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ತೇರದಾಳ ಕ್ಷೇತ್ರದ ವಿಶೇಷ ಚುನಾವಣಾಧಿಕಾರಿ ಸಾಜೀದ್ ಮುಲ್ಲಾ ಹಾಗೂ ರಬಕವಿ-ಬನಹಟ್ಟಿ ತಾಲೂಕು ಚುನಾವಣಾಧಿಕಾರಿ ಗಿರೀಶ ಸ್ವಾದಿ ಸಭೆ ನಡೆಸಿದರು. ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಇದ್ದರು.
Published on

ಮಹಾಲಿಂಗಪುರ: ಪಟ್ಟಣದ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ತಾಲೂಕು ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ತೇರದಾಳ ಕ್ಷೇತ್ರದ ವಿಶೇಷ ಚುನಾವಣಾಧಿಕಾರಿ ಸಾಜೀದ್ ಮುಲ್ಲಾ ಹಾಗೂ ರಬಕವಿ- ಬನಹಟ್ಟಿ ತಾಲೂಕು ಚುನಾವಣಾಧಿಕಾರಿ ಗಿರೀಶ ಸ್ವಾದಿ ಶನಿವಾರ ಸಭೆ ನಡೆಸಿದರು.

ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ತಾಲೂಕು ಹೋರಾಟ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ನಡೆದ ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ಚುನಾವಣೆ ಬಹಿಷ್ಕರಿಸುವ ಯೋಜನೆ ಕೈಬಿಟ್ಟು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ನೀವು ಪಡೆದುಕೊಳ್ಳಬೇಕೆಂದು ಹೋರಾಟಗಾರರಲ್ಲಿ ಮನವಿ ಮಾಡಿದರು.

ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, 724 ದಿನದಿಂದ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಮುಧೋಳ ತಾಲೂಕಿನಲ್ಲಿ ಮಹಾಲಿಂಗಪುರ ಸೇರಿಸಿಕೊಂಡು ಎರಡು ತಿಂಗಳಲ್ಲಿ ಹೋಬಳಿ ರಚಿಸುವುದಾಗಿ ಫೈಲ್ ತರಿಸಿಕೊಂಡ ಉಪವಿಭಾಗಾಧಿಕಾರಿಗಳು ನಾಲ್ಕು ತಿಂಗಳಾದರೂ ಮಾಹಿತಿಯೇ ನೀಡಿಲ್ಲ. ಹೀಗಾಗಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದರು.

ತಾಲೂಕು ರಚನೆಗೆ 32 ವರ್ಷಗಳ ಬೇಡಿಕೆ ಇದೆ. ಅನೇಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಇದರ ಬಗ್ಗೆ ಮಾಹಿತಿ ನೀಡಿದರೂ ತಾಲೂಕು ರಚನೆಗೆ ಮುಂದಾಗುತ್ತಿಲ್ಲ. ಭೌಗೋಳಿಕವಾಗಿ ಅರ್ಹತೆ ಹೊಂದಿರುವ ಮಹಾಲಿಂಗಪುರವನ್ನು ತಾಲೂಕು ಮಾಡಲು ಅಗತ್ಯ ಎಲ್ಲ ದಾಖಲೆಗಳನ್ನು ಸರ್ಕಾರಕ್ಕೆ ತಲುಪಿಸಬೇಕು. ಈ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಲು ಅವಕಾಶ ನೀಡಬೇಕು. ನಂತರ ಚುನಾವಣಾ ಬಹಿಷ್ಕಾರದ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೋರಾಟ ಸಮಿತಿ ಸದಸ್ಯರು ತಿಳಿಸಿದರು.

ಹೋರಾಟಗಾರರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗುವುದೆಂದು ಭರವಸೆ ನೀಡಿದರು.
ಹೋರಾಟ ಸಮಿತಿಯ ಶಿವಲಿಂಗ ಟಿರಕಿ, ಸಿದ್ದಪ್ಪ ಶಿರೋಳ, ಮಹಾದೇವ ಮಾರಾಪುರ, ರಾಜೇಂದ್ರ ಮಿರ್ಜಿ, ವೀರೇಶ ಆಸಂಗಿ, ರಫೀಕ್ ಮಾಲದಾರ, ಜಯರಾಮ ಶೆಟ್ಟಿ ಇತರರಿದ್ದರು.

‘ವಿಜಯವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಹೋರಾಟ ಸಮಿತಿ ಸದಸ್ಯ ರಫೀಕ್ ಮಾಲದಾರ, ಜಿಲ್ಲಾಧಿಕಾರಿಗಳ ಭೇಟಿಗೆ ಏ. 10 ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಹೋರಾಟ ಸಮಿತಿಯವರಿಗೆ ಸಮಯ ನಿಗದಿಪಡಿಸಲಾಗಿದ್ದು, ಅವರ ಭೇಟಿಯ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net