ಪತ್ರಿಕೆಗಿದೆ ಸಮಾಜ, ಸರ್ಕಾರದ ಕಣ್ಣು ತೆರೆಸುವ ತಾಕತ್ತು

SIDDAPUR PATRIKE
Published on

ಸಿದ್ದಾಪುರ: ಪತ್ರಿಕಾರಂಗ ಇಂದು ಅತ್ಯಂತ ಮಹತ್ವವಾಗಿದ್ದು, ಇದು ದೃಶ್ಯ ಮಾಧ್ಯಮಗಿಂತ ಹೆಚ್ಚು ಪ್ರಭಾವಶಾಲಿ ಆಗಿದೆ. ಪತ್ರಿಕೆ ಸಮಾಜ ಹಾಗೂ ಸರ್ಕಾರದ ಕಣ್ಣುಗಳನ್ನು ತೆರೆಸುವಂತಹುದಾಗಿದೆ ಎಂದು ಸರಕುಳಿ ಜಗದಂಬಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ಜಿ. ಹೆಗಡೆ ತ್ಯಾರಗಲ್ ಹೇಳಿದರು.

ತಾಲೂಕಿನ ಸರಕುಳಿ ಜಗದಂಬಾ ಪ್ರೌಢಶಾಲೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಗುರುಮನೆ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಪತ್ರಿಕೆ ಜನರಿಗೆ ಸುಲಭವಾಗಿ ಸಿಗುತ್ತಿದ್ದರೂ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸರಕುಳಿ ಸಹಿಪ್ರಾ ಶಾಲೆಯ ಎಸ್​ಡಿಎಂಸಿ ಅಧ್ಯಕ್ಷ ಪ್ರಶಾಂತ ಹೆಗಡೆ ಮೇಲ್ಗಿರಿ ತಾಲೂಕು ಪತ್ರಕರ್ತರ ಮಾಹಿತಿ ಬಿಡುಗಡೆ ಮಾಡಿದರು. ಬಿಇಒ ಜಿ.ಐ.ನಾಯ್ಕ ಮಾತನಾಡಿ ಪತ್ರಿಕೆಯ ಶಕ್ತಿ ಅಗಾಧವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆ ಸಮಾಜ ಹಾಗೂ ಸರ್ಕಾರವನ್ನು ಎಚ್ಚರಿಸುವ ಕನ್ನಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ಸರ್ಕಾರ ಪತ್ರಕರ್ತರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಬಸವರಾಜ ಪಾಟೀಲ ಮುಂಡಗೋಡ ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೃಷ್ಣಮೂರ್ತಿ ಹೆಗಡೆ, ಸಹಿಪ್ರಾ ಶಾಲೆಯ ಮುಖ್ಯಾಧ್ಯಾಪಕಿ ಕಲ್ಪನಾ ವೈದ್ಯ, ಇತರರು ಉಪಸ್ಥಿತರಿದ್ದರು.

ಸನ್ಮಾನ: ಹಿರಿಯ ಪತ್ರಕರ್ತರಾದ ನರೇಂದ್ರ ಹೆಗಡೆ ಹೊಂಡಗಾಶಿ ದಂಪತಿಯನ್ನು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದಿಂದ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಶ್ರೀ ನಿವಾಸ ಶಾನಭಾಗ ಹಾರ್ಸಿಕಟ್ಟಾ ಅವರಿಗೆ ಗುರುಮನೆ ದತ್ತಿನಿಧಿ ಪ್ರಶಸ್ತಿಯನ್ನು ಕೆಕ್ಕಾರ ನಾಗರಾಜ ಭಟ್ಟ ಪ್ರದಾನ ಮಾಡಿ ಗೌರವಿಸಿದರು. ನರೇಂದ್ರ ಹೆಗಡೆ ಹಾಗೂ ಶ್ರೀನಿವಾಸ ಶಾನಭಾಗ ಅನಿಸಿಕೆ ವ್ಯಕ್ತಪಡಿಸಿದರು.

ಅಂಕಿತಾ ಸಂಗಡಿಗರು ಹಾಗೂ ರೇಖಾ ಹೆಗಡೆ ಹೊಂಡಗಾಶಿ ಪ್ರಾರ್ಥನೆ ಹಾಡಿದರು. ಪತ್ರಕರ್ತರಾದ ಸುಜಯ ಭಟ್ಟ, ಶ್ರೀಧರ ಹೆಗಡೆ, ನಾಗರಾಜ ಭಟ್ಟ, ಶಿವಶಂಕರ ಕೋಲಸಿರ್ಸಿ ಹಾಗೂ ರಮೇಶ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net