ಹೊಸ ರಸ್ತೆಯಲ್ಲಿ ಹೊಂಡಗಳೇ ಅಧಿಕ

road
Published on

ರಾಘವೇಂದ್ರ ಪೈ ಗಂಗೊಳ್ಳಿ, ಕುಂದಾಪುರ

ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊವಾಡಿ ಸೇತುವೆಯಿಂದ ಎಸ್.ಸಿ ಕಾಲನಿಗೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯಲ್ಲೇ ಹೊಂಡಗಳು ಇದ್ದು, ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪ ವ್ಯಕ್ತವಾಗಿದೆ.

ಮೊವಾಡಿ ಎಸ್.ಸಿ ಕಾಲನಿಗೆ ಹೋಗುವ ರಸ್ತೆ ಹಾಗೂ ನಾಡ ಗ್ರಾಮ ಪಂಚಾಯಿತಿ ಕಚೇರಿಯಿಂದ ಇಗರ್ಜಿ ಗುಡ್ಡೆ ಎಸ್.ಸಿ ಕಾಲನಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆಂದು 2021-22ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಎಸ್‌ಸಿಪಿ ಯೋಜನೆಯಡಿ 1 ಕೋಟಿ ರೂ. ಮಂಜೂರಾಗಿದ್ದು, 2022-23ನೇ ಸಾಲಿನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿತ್ತು. ಆದರೆ ಕಾಮಗಾರಿ ನಡೆದು ವರ್ಷ ಮುಗಿಯುತ್ತಿದ್ದಂತೆ ಹಲವೆಡೆ ಹೊಂಡಗಳು ಕಾಣಲಾರಂಭಿಸಿವೆ.

ಮೊವಾಡಿ ಸೇತುವೆ ಮೂಲಕ ಕುಂದಾಪುರಕ್ಕೆ ಹತ್ತಿರವಾಗಿದ್ದು, ಈ ಹಿನ್ನೆಲೆಯಲ್ಲಿ ನಾಡ-ಗುಡ್ಡೆಯಂಗಡಿಯಾಗಿ ಈ ಭಾಗದಲ್ಲಿ ವಾಹನ ಸಂಚಾರ ಹೆಚ್ಚಿನ ಸಂಖ್ಯೆಗಳಲ್ಲಿವೆ. ಮೋವಾಡಿ ಎಸ್.ಸಿ ಕಾಲನಿಗೆ ಸಂಪರ್ಕಿಸುವ ರಸ್ತೆ ಸುಮಾರು ಒಂದು ಕಿ.ಮೀಯಷ್ಟು ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರ ತೀರಾ ಕಷ್ಟದಾಯಕವಾಗಿದೆ. ತುರ್ತು ಸಂದರ್ಭ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಕಳಪೆ ಕಾಮಗಾರಿಯೇ ರಸ್ತೆ ಅವ್ಯವಸ್ಥೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಿಂದಾಗಿ ರಸ್ತೆ ದುರಸ್ತಿ

ರಸ್ತೆ ಅಭಿವೃದ್ಧಿಪಡಿಸಬೇಕೆಂಬ ದಶಕಗಳ ಬೇಡಿಕೆಗೆ ಸ್ಪಂದನೆ ವ್ಯಕ್ತವಾಗದ ಹಿನ್ನಲೆಯಲ್ಲಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಅಂದಿನ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು. ಸ್ಥಳೀಯರ ಪ್ರತಿಭಟನೆ ಹಾಗೂ ಶಾಸಕರ ಭರವಸೆಯನ್ವಯ ಮೊವಾಡಿ ರಸ್ತೆ ಕಾಂಕ್ರೀಟಿಕರಣಗೊಂಡಿದೆ. ವರ್ಷ ಕಳೆಯುವುದರ ಒಳಗೆ ಕಾಂಕ್ರಿಟ್ ರಸ್ತೆ ಮತ್ತೊಮ್ಮೆ ಹಾಳಾಗಿದ್ದು, ಮೋವಾಡಿ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊವಾಡಿ ಸೇತುವೆಯಿಂದ ಮೊವಾಡಿ ಎಸ್.ಸಿ ಕಾಲನಿಗೆ ಹೋಗುವ ಕಾಂಕ್ರೀಟ್ ರಸ್ತೆಯಯಲ್ಲಿ ಹೊಂಡ ಬಿದ್ದಿರುವುದು ಗಮನಕ್ಕೆ ಬಂದಿಲ್ಲ. ಮೊವಾಡಿ ರಸ್ತೆ ಕಾಮಗಾರಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು. ಕಳಪೆ ಕಾಮಗಾರಿ ನಡೆದಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು. -ಮೂರ್ತಿ ಎಂ.ಪಿ, ಜೆಇ, ಲೋಕೋಪಯೋಗಿ ಇಲಾಖೆ, ಕುಂದಾಪುರ https://www.vijayavani.net/suicide-due-to-family-feud https://www.vijayavani.net/kasaragod-endo-victim-dies

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net