ಪಪಂಗೆ ಬಂತು ಹೊಸ ಕಟ್ಟಡ ಭಾಗ್ಯ

14mkh1
Published on

ಎಂ.ಕೆ.ಹುಬ್ಬಳ್ಳಿ: ಸ್ವಂತ ಸೂರಿಲ್ಲದೆ ಇತರ ಇಲಾಖೆಗಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಈಗ ಸ್ವಂತ ಕಟ್ಟಡದ ಭಾಗ್ಯ ಬಂದಿದೆ.

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರ ಪ್ರಯತ್ನದ ಲವಾಗಿ ರಾಜ್ಯ ಸರ್ಕಾರ ಪಪಂಗೆ ನೂತನ ಕಟ್ಟಡ ನಿರ್ಮಿಸಿಕೊಳ್ಳಲು 5 ಕೋಟಿ ರೂ. ಅನುದಾನ ಮಂಜೂರಾತಿಗೆ ಅಸ್ತು ಅಂದಿದೆ. ಪಪಂ ಆಸ್ತಿ ಸಂಖ್ಯೆ 375/5ರ ಜಾಗದಲ್ಲಿ ಸುಸಜ್ಜಿತ ಮತ್ತು ಮೂಲಸೌಕರ್ಯಗಳನ್ನೊಳಗೊಂಡ ಕಟ್ಟಡ ನಿರ್ಮಾಣಗೊಳ್ಳಲಿದೆ.

ಎಂ.ಕೆ.ಹುಬ್ಬಳ್ಳಿ ಪಪಂ ಅಲ್ಲದೇ, ರಾಜ್ಯದ ವಿವಿಧ 5 ಪುರಸಭೆಗಳಿಗೂ ಕಟ್ಟಡ ನಿರ್ಮಿಸಿಕೊಳ್ಳಲು ಸರ್ಕಾರ ಅನುದಾನ ಮಂಜೂರು ಮಾಡಿದ್ದು, ಅನುದಾನದ ಶೇ.75 ಸರ್ಕಾರದ ವಂತಿಕೆ, ಉಳಿದ ಶೇ.25 ಹಣವನ್ನು ಸ್ಥಳೀಯ ಸಂಸ್ಥೆಗಳ ವಂತಿಕೆ ಸೇರಿಸಿ ಕಟ್ಟಡ ನಿರ್ಮಿಸಬೇಕೆಂದು ಆದೇಶದಲ್ಲಿ ಸರ್ಕಾರ ಸೂಚಿಸಿದೆ.

ದಶಕದ ನಂತರ ಈಡೇರಿದ ಬೇಡಿಕೆ: 2015ರಲ್ಲಿ ಪಪಂ ಆಗಿದ್ದರೂ ಈವರೆಗೆ ಸ್ವಂತ ಕಟ್ಟಡ ಇರಲಿಲ್ಲ. ದಶಕದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಇತರ ಇಲಾಖೆಗಳ ಹಳೆಯ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುವಂತಾಗಿತ್ತು.

ಈಗ ಶಾಸಕರ ಪ್ರಯತ್ನದ ಲವಾಗಿ ಉಪ ಪೊಲೀಸ್ ಠಾಣೆ ಪಕ್ಕದ ಖುಲ್ಲಾ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಪಪಂ ಸದಸ್ಯರಿಗೂ ಮತ್ತು ಸಾರ್ವಜನಿಕರಿಗೆ ಖುಷಿ ತರಿಸಿದೆ. ಪಪಂ ಕಟ್ಟಡ ನಿರ್ಮಿಸಲು 5 ಕೋಟಿ ರೂ. ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net