

ಬೆಂಗಳೂರು: ಮುಂದಿನ ಒಂದು ವಾರದೊಳಗೆ ಜಾಹೀರಾತು ನೀತಿಯ ಕರಡು ಪ್ರತಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡು ಪ್ರತಿಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಜಾಹೀರಾತು ನೀತಿ ಬಾಕಿ ಉಳಿದಿತ್ತು. ಪ್ರಸ್ತುತ ಸಂಘ-ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಾಗಿದೆ. 60 ಅಡಿಗಿಂತ ಹೆಚ್ಚು ಅಗಲ ಇರುವ ರಸ್ತೆಗಳಲ್ಲಿ ‘ಗ್ರೂಪ್ ಪ್ಯಾಕೇಜ್’ ತಯಾರಿಸಿ ಅವಕಾಶ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲೆ ಜಾಹಿರಾತು ನೀಡಲು ಅವಕಾಶ ನೀಡಲಾಗುವುದು. ಬಿಬಿಎಂಪಿಗೆ ತೆರಿಗೆ ನೀಡಿ ಖಾಸಗಿ ಕಟ್ಟಡಗಳು ಬಾಡಿಗೆ ನೀಡಬಹುದು ಎಂದರು.
ಕಟ್ಟಡಗಳ ವಿಸ್ತೀರ್ಣ, ಎತ್ತರಕ್ಕೆ ತಕ್ಕಂತೆ ಏಕಸ್ವಾಮ್ಯತೆ ತರಲಾಗುವುದು. ಮನಬಂದಂತೆ ಹಾಕಲು ಅವಕಾಶವಿಲ್ಲ. ಫಲಕಗಳನ್ನು ಮಾಡಲು ಯಾವ ಗುಣಮಟ್ಟದ ವಸ್ತು ಬಳಸಬೇಕೆಂದು ನಂತರ ತಿಳಿಸಲಾಗುವುದು. ಸರ್ಕಾರದಲ್ಲಿ ಇರುವ ಮೀಸಲಾತಿಗೆ ಅನುಗುಣವಾಗಿ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಹಿಂದಿನ ಸರ್ಕಾರ ಒಂದಷ್ಟು ಅವಕಾಶ ನೀಡಿದ್ದು ಕಾನೂನು ಪ್ರಕಾರವಾಗಿ ಇದ್ದರೆ ರಕ್ಷಣೆ ಮಾಡಲಾಗುವುದು. ಏನೂ ಮಾಡದೆ ಇದ್ದವರನ್ನು ಕಾನೂನಿನ ಪ್ರಕಾರ ವಜಾ ಮಾಡಲಾಗುವುದು ಎಂದು ತಿಳಿಸಿದರು.
ದಾವೆ ಹೂಡಿರುವವರಿಗೆ ಅವಕಾಶವಿಲ್ಲ:
ಸರ್ಕಾರಕ್ಕೆ ಹಣ ಬಾಕಿ ಉಳಿಸಿಕೊಂಡಿರುವ, ದಾವೆ ಹೂಡಿರುವವರಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ನಾವು ಹೇಗೆ ಚುನಾವಣೆಗೆ ನಿಲ್ಲುವಾಗ ಯಾವುದೇ ಬಾಕಿಗಳನ್ನು ಉಳಿಸಿಕೊಳ್ಳದೆ ಇರುತ್ತೇವೆಯೆ, ಅದೇ ರೀತಿ ಇಲ್ಲಿ ಭಾಗವಹಿಸುವವರು ಎಲ್ಲಾ ಬಾಕಿಗಳನ್ನು ಕಟ್ಟಬೇಕು.
ಒಂದಷ್ಟು ಪ್ರಕರಣಗಳು ನ್ಯಾಯಲಯದಲ್ಲಿವೆ ಎಂದಾಗ ಆ ಪ್ರಕರಣಗಳಿಗೆ ನಾವು ಏನು ಮಾಡಲು ಆಗುವುದಿಲ್ಲ. ಅಲ್ಲಿ ತೀರ್ಮಾನವಾದ ನಂತರ ಬಗೆಹರಿಸಬಹುದು. ಜತೆಗೆ ನ್ಯಾಯಾಲಯವು ಒಂದಷ್ಟು ಸೂಚನೆಗಳನ್ನು ನೀಡಿತ್ತು. ಅದನ್ನು ಗಣನೆಗೆ ತೆಗೆದುಕೊಂಡು ನಿಯಮಗಳನ್ನು ರೂಪಿಸಲಾಗಿದೆ. ಮೆಟ್ರೋ ಒಳಗೆ ಆ ನಿಗಮ ನೋಡಿಕೊಳ್ಳುತ್ತದೆ. ಹೊರಗಡೆ ಪಾಲಿಕೆ ಮತ್ತು ಮೆಟ್ರೋ ಸಹಭಾಗಿತ್ವದಲ್ಲಿ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದು ಡಿಸಿಎಂ ವಿವರಿಸಿದರು.
ಸುಮಾರು 600 ಕೋಟಿ ರೂ. ಮೊತ್ತದ ಜಾಹೀರಾತು ಹಣ ಬಾಕಿ ಇದೆ. ಎಲ್ಲವನ್ನು ವಸೂಲಿ ಮಾಡಲಾಗುವುದು, ಹಾಗೂ ಬಾಕಿ ಉಳಿಸಿಕೊಂಡವರು ಭಾಗವಹಿಸಲು ಅವಕಾಶ ನೀಡುವುದಿಲ್ಲ. ನಗರ ಸೌಂದರ್ಯ ಕಾಪಾಡಲು ಆದ್ಯತೆ ನೀಡಲಾಗುವುದು.
- ಡಿ.ಕೆ.ಶಿವಕುಮಾರ್, ಡಿಸಿಎಂ