ಗ್ರಾಮೀಣ ಪರಂಪರೆ ಸಂರಕ್ಷಣೆ ಅಗತ್ಯ

ಹೊಳೆನರಸೀಪುರ ತಾಲೂಕಿನ ಗುಳಿಸಾತೇನಹಳ್ಳಿ ಗ್ರಾಮದಲ್ಲಿ ಸ್ನೇಹಜೀವಿ ಕ್ರಿಕೇರ್ಸ್‌ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.
ಹೊಳೆನರಸೀಪುರ ತಾಲೂಕಿನ ಗುಳಿಸಾತೇನಹಳ್ಳಿ ಗ್ರಾಮದಲ್ಲಿ ಸ್ನೇಹಜೀವಿ ಕ್ರಿಕೇರ್ಸ್‌ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.
Published on

ಹೊಳೆನರಸೀಪುರ: ಆರೋಗ್ಯಕರ ಬದುಕಿಗಾಗಿ ಗ್ರಾಮೀಣ ಭಾಗದ ಪರಂಪರೆಯನ್ನು ಉಳಿಸಿ ಮುಂದುವರಿಸಿಕೊಂಡು ಹೋಗುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಮುಖ್ಯ ಎಂದು ಗ್ರಾಪಂ ಮಾಜಿ ಸದಸ್ಯ ಜವರೇಗೌಡ ತಿಳಿಸಿದರು.

ತಾಲೂಕಿನ ಗುಳಿಸಾತೇನಹಳ್ಳಿ ಗ್ರಾಮದಲ್ಲಿ ಭಾನುವಾರ 90 ವರ್ಷದ ಹಿರಿಯ ಮಹಿಳೆಯರಿಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳು ಹಾಗೂ ಉನ್ನತ ಪದವಿ ಹೊಂದಿದ ಗ್ರಾಮಸ್ಥರಿಗೆ ಪುರಸ್ಕರಿಸುವ ಸಲುವಾಗಿ ಸ್ನೇಹಜೀವಿ ಕ್ರಿಕೇರ್ಸ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾಭ್ಯಾಸಕ್ಕೆ ಒತ್ತು ಕೊಡುವ ಮೂಲಕ ಗ್ರಾಮಕ್ಕೆ, ತಂದೆ ತಾಯಿಗೆ ಹೆಸರು, ಕೀರ್ತಿ ತುರುವಂತೆ ಮಕ್ಕಳನ್ನು ಬೆಳಸಬೇಕು. ಇಂದಿನ ಜಾಗತೀಕರಣದ ಪ್ರಭಾವದಿಂದ ಹಳ್ಳಿಗಾಡುಗಳು ಸಹ ಸಕಲ ಸವಲತ್ತು ಗಳನ್ನು ಹೊಂದುತ್ತಿದೆ. ಕೇವಲ ಪಟ್ಟಣ ವಾಸಿಗಳಿಗಷ್ಟೇ ಸಾಧನೆಯ ಅವಕಾಶ ಇದೆ ಎನ್ನುವಂತಿಲ್ಲ. ಹೆಣ್ಣುಮಕ್ಕಳನ್ನು ವ್ಯಾಸಂಗದ ಅವಧಿಯಲ್ಲೇ ಮದುವೆ ಮಾಡುವ ಪ್ರವೃತ್ತಿ ಬಿಡಬೇಕು. ಬದಲಿಗೆ ಸಂಸ್ಕಾರಯುತವಾಗಿ ಅವರಲ್ಲಿ ಉತ್ತಮ ಗುಣಗಳನ್ನು ಬಿತ್ತಬೇಕು. ನಂತರ ಸಾಂಸಾರಿಕ ಜೀವನ ಇದ್ದೇ ಇರುತ್ತದೆ. ಸಹಬಾಳ್ವೆಯೊಂದೇ ಗ್ರಾಮದ ನೆಮ್ಮದಿಯ ಬದುಕಿನ ಸೋಪಾನವಾಗಿರುತ್ತದೆ ಎಂದರು.

ಶಿಕ್ಷಕ ಚೇತನ್ ಮಾತನಾಡಿ, ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಅವಕಾಶ ಶಿಕ್ಷಕ ವರ್ಗಕ್ಕೆ ಅತೀವ ತೃಪ್ತಿ ತರುವ ಕೆಲಸವಾಗಿರುತ್ತದೆ. ಗ್ರಾಮದ ಹಿರಿಮೆಗೆ ಅಲ್ಲಿನ ಶೈಕ್ಷಣಿಕ ಪ್ರಗತಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.

ತುಂಬು ಜೀವನ ನಡೆಸಿರುವ ಲಕ್ಷ್ಮಮ್ಮ, ಅನಸೂಯಾ, ಖುರ್ಷೀದ್‌ಬೇಗಂ ಅವರಿಗೆ ಶತಾಯುಷಿಗಳಾಗುವಂತೆ ಆಶಿಸಿ ಗೌರವಿಸಲಾಯಿತು. ಗ್ರಾಮದ ಜಯಣ್ಣ, ಪರಮೇಶ್ ಎಂಬ ಸಾಧಕ ರೈತರನ್ನು ಪುರಸ್ಕರಿಸಲಾಯಿತು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಸ್ನಾತಕ ಹಾಗೂ ಸ್ನಾತ್ತಕೋತ್ತರ ಪದವಿ ಪಡೆವರಿಗೆ ಇದೇ ವೇಳೆ ಸನ್ಮಾನಿಸಲಾಯಿತು. ನಿಡುವಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿರುವ ಗ್ರಾಮದ ಯುವ ವೈದ್ಯ ಡಾ.ಜೀವನ್, ವಿದೇಶದಲ್ಲಿ ಉದ್ಯೋಗ ಪಡೆದಿರುವ ಅಶೋಕ್ ಹಾಗೂ ಫಾರ್ಮಸಿ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಜಿ.ಟಿ.ನಾಗರಾಜ್ ಅವರ ಸೇವೆ ಗುರುತಿಸಿ ಪ್ರೋತ್ಸಾಹಿಸಲಾಯಿತು. ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣೇಗೌಡ, ಮಾಜಿ ಸದಸ್ಯ ಶೇಷಪ್ಪಶೆಟ್ಟಿ, ಮುಖಂಡ ರಂಗಸ್ವಾಮಿ, ಆಯೋಜಕ ಬಳಗದ ಅಧ್ಯಕ್ಷ ಖದೀರ್‌ಅಹಮದ್, ಶಿಕ್ಷಕ ಜಿ.ಆರ್.ರಮೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ವೆಂಕಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net