

ಮುಧೋಳ: ಎನ್‌ಡಿಎ ಮಿತ್ರ ಪಕ್ಷಗಳ ಜತೆ ಮೋದಿ ನೇತೃತ್ವದ ನೂತನ ಸರ್ಕಾರದಿಂದ ಮೂರನೇ ಬಾರಿಯೂ ಜನತೆಗೆ ಅಚ್ಛೆ ದಿನ ಬರಲ್ಲ. ಈ ಸರ್ಕಾರ ಒಂದು ವರ್ಷ ಕೂಡ ನಡೆಯಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಒಕ್ಕೂಟದಲ್ಲಿ ಭಿನ್ನಾಭಿಪ್ರಾಯ ಇರುವುದರಿಂದ ಸರ್ಕಾರ ಬಹಳ ದಿನ ನಡೆಯುವುದಿಲ್ಲ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಕೈ ಬಿಡುವ ಕುರಿತು ಚರ್ಚೆ ನಡೆದಿಲ್ಲ. ಈ ಯೋಜನೆಯಿಂದ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳ ಬಗ್ಗೆ ನಮಗೆ ಗ್ಯಾರಂಟಿ ಇತ್ತು. ಈ ಕುರಿತು ಆತ್ಮಾವಲೋಕನ ನಡೆದಿದೆ ಎಂದರು. ಕಳೆದ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದು ಜನರು ನೀಡಿರುವ ಲಿತಾಂಶಕ್ಕೆ ತಲೆಬಾಗಲೇಬೇಕಿದೆ ಎಂದರು.
ಎರಡು ತಿಂಗಳಿಂದಾಗಿ ಚುನಾವಣೆ ನೀತಿ ಸಂಹಿತೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಈಗ ಮತ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ನಗರದ ಕುಂಬಾರ ಗಲ್ಲಿಯಿಂದ ಮಹಾಲಿಂಗಪುರ ಮುಖ್ಯರಸ್ತೆ ಕಾಮಗಾರಿಗೆ 11 ಕೋಟಿ ರೂ. ಮಂಜೂರಾಗಿದ್ದು, ಕೂಡಲೇ ಟೆಂಡರ್ ಕರೆಯಲಾಗುವುದು. ಜಾಲಿಬೇರ ಗ್ರಾಮದ ಹತ್ತಿರದ ಬ್ರಿಜ್ ಕಂ. ಬ್ಯಾರೇಜ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ನಗರ ಅಧ್ಯಕ್ಷ ರಾಘು ಮೊಕಾಶಿ, ಜಿಲ್ಲಾ ಉಪಾಧ್ಯಕ್ಷ ದಾನೇಶ ತಡಸಲೂರ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಉದಯಸಿಂಗ್ ಪಡತಾರೆ, ಸದುಗೌಡ ಪಾಟೀಲ, ಶಿವಾನಂದ ಮುಳ್ಳೂರ, ಮುದಕಪ್ಪ ಅಂಬಿ, ಸಂಗಣ್ಣ ಚಿಪ್ಪಲಕಟ್ಟಿ, ಎಸ್.ಪಿ. ದಾನಪ್ಪಗೋಳ, ಡಾ. ಕಲ್ಯಾಣಕುಮಾರ ಮಸಳಿ, ನಗರಸಭೆ ಸದಸ್ಯ ಸಂತೋಷ ಪಾಲೋಜಿ, ತಹಸೀಲ್ದಾರ್ ವಿನೋದ ಹತ್ತಳ್ಳಿ ಇದ್ದರು.
ಬೆಳಗಾವಿ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದಾಗಿ ಘಟಪ್ರಭಾ ನದಿಯ ನೀರಿನಮಟ್ಟ ಹೆಚ್ಚಾಗಿದ್ದು, ಯಾವುದೇ ಸಂದರ್ಭದಲ್ಲೂ ನದಿ ತೀರದ ಜನ-ಜಾನುವಾರಗಳಿಗೆ ತೊಂದರೆಯಾಗಬಹುದು. ಆದ್ದರಿಂದ ನದಿ ತೀರದ ರೈತರು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಆರ್.ಬಿ. ತಿಮ್ಮಾಪುರ, ಸಚಿವ