

ಸಕಲೇಶಪುರ: ಸೇವಾ ಚಟುವಟಿಕೆಯ ದೂರದೃಷ್ಟಿಯ ಫಲವಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ನೂರು ವರ್ಷ ಪೂರೈಸಿದೆ ಎಂದು ಭಾರತೀಯ ಸಾಹಿತ್ಯ ಪರಿಷದ್‌ನ ತಾಲೂಕು ಅಧ್ಯಕ್ಷ ಡಾ.ಆರ್.ಅಣ್ಣಪ್ಪಸ್ವಾಮಿ ಹೇಳಿದರು.
ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶತಾಬ್ದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೂರು ವರ್ಷಗಳ ಹಿಂದೆಯೇ ಹಿಂದು ಧರ್ಮಕ್ಕಿರುವ ಅಪಾಯಗಳನ್ನು ಗುರುತಿಸಿ ಅಂದಿನ ಮಹಾತ್ಮರು ತಮ್ಮ ವೈಯಕ್ತಿಕ ಜೀವನ ತ್ಯಾಗಮಾಡಿ ಧರ್ಮ ರಕ್ಷಣೆಗಾಗಿ ಸಂಘವನ್ನು ಹುಟ್ಟು ಹಾಕಿದರು. ಪರಿಣಾಮ ನೂರು ವರ್ಷಗಳ ಅವಧಿಯಲ್ಲಿ ಹಿಂದು ಧರ್ಮದ ವಿರುದ್ಧ ನಡೆದ ಹಲವು ಷಡ್ಯಂತ್ರಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲು ಸಾಧ್ಯವಾಯಿತು ಎಂದರು.
ಸಂಘದ ಪ್ರತಿ ಶಾಖೆಯಲ್ಲೂ ಸ್ವಯಂ ಸೇವಕರಿಗೆ ದೇಶಭಕ್ತಿಯೊಂದಿಗೆ ದೈಹಿಕ ಚಟುವಟಿಕೆ ತರಬೇತಿ ನೀಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಜಾಗೃತಿಗೊಳಿಸುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಮಹಿಳೆಯರೇ ನಿರ್ವಹಿಸುವ ಐದು ಸಾವಿರ ಶಾಖೆಗಳಿದ್ದು ಹಿಂದೆಂದಿಗಿಂತಲೂ ಸರ್ಮಾಥವಾಗಿ ಸಂಘ ಕೆಲಸ ಮಾಡುತ್ತಿದೆ. ಸಂಘಕ್ಕೆ ವೃದ್ಧಾಪ್ಯವಿಲ್ಲದಾಗಿದ್ದು, ಪ್ರತಿ ಶಾಖೆಯೂ ನವಚೈತನ್ಯ ಪಡೆದುಕೊಳ್ಳುತ್ತಿದೆ ಎಂದು ಹೇಳಿದರು.
ಸಮಾಜದ ಆಂತರ್ಯದಲ್ಲಿ ಸಂಘ ಕೆಲಸ ಮಾಡುತ್ತಿದ್ದು ದೇಶಕಟ್ಟುವ ಬಗ್ಗೆ ಸಂಘ ತನ್ನದೇ ಕಾರ್ಯಸೂಚಿಯನ್ನು ಹೊಂದಿದೆ. ಪ್ರಪಂಚದಲ್ಲಿ ರಾಷ್ಟ್ರೀಯ ಸ್ವಯಂ ಸಂಘ ಅತ್ಯಂತ ಬಲಿಷ್ಠ ಹಾಗೂ ಬೃಹತ್ ಸಂಘವಾಗಿದ್ದು, ಸಂಘದ ನಿರ್ಧಾರಗಳನ್ನು ವಿಶ್ವವೇ ಸೂಕ್ಷ್ಮವಾಗಿ ಗಮನಿಸುತ್ತಿರುವುದು ಸಂಘದ ಬಲಿಷ್ಠತನಕ್ಕೆ ಸಾಕ್ಷಿಯಾಗಿದೆ. ದೇಶ ಇಂದು ಸಾಕಷ್ಟು ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಸಮಸ್ಯೆಗಳನ್ನು ನಿಗ್ರಹಿಸುವ ಶಕ್ತಿಯನ್ನು ಸಂಘ ಹೊಂದಿದೆ. ಸಂಘ ಸಾಮರಸ್ಯ, ಸ್ವದೇಶಿ ವಸ್ತುಗಳ ಬಳಕೆ, ಪ್ರಕೃತಿ ಸಂರಕ್ಷಣೆ, ಸಮಾಜಸೇವೆ ಹಾಗೂ ನಾಗರಿಕ ಶಿಷ್ಟಚಾರದಂತಹ ಪಂಚಶೀಲತತ್ವದಡಿ ಕೆಲಸ ಮಾಡಲಾಗುತ್ತಿದ್ದು, ಸಂಘ ನೂರು ವರ್ಷಗಳನ್ನು ಪೂರೈಸಿರುವುದು ದೇಶದ ನಾಗರಿಕರೆಲ್ಲ ಹೆಮ್ಮೆಪಡುವ ವಿಚಾರ ಎಂದರು.
ಸದ್ಯ ದೇಶ ವಲಸಿಗರ ಸಮಸ್ಯೆಯನ್ನು ಎದುರಿಸುತ್ತಿದ್ದು, ಇವರಿಂದ ಮುಂದಿನ ದಿನಗಳಲ್ಲಿ ಹಿಂದು ಧರ್ಮಕ್ಕೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತಿದೆ. ಸಂಘದ ಸ್ವಯಂ ಸೇವಕರ ನಡೆನುಡಿಯನ್ನು ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ. ಆದ್ದರಿಂದ, ಸಂಘದ ಸ್ವಯಂ ಸೇವಕರು ಸಮಾಜಕ್ಕೆ ಮಾದರಿಯಾಗಿರ ಬೇಕು ಎಂದರು.
ಪ್ರವೀಣ್ ಓಸ್ವಾಲ್, ಸಂಘದ ತಾಲೂಕು ಸಂಚಾಲಕ ನೂತನ್‌ಕುಮಾರ್, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮುಂತಾದವರಿದ್ದರು.