

ರಾಷ್ಟ್ರಧ್ವಜವನ್ನು ಅತ್ಯಂತ ಹೆಮ್ಮೆಯಿಂದ ಮತ್ತು ಗೌರವದಿಂದ ಕಾಣಬೇಕು ಎಂದು ಸಮಾಜಸೇವಕ ಕೆ.ರಘುರಾಮ್ ವಾಜಪೇಯಿ ಹೇಳಿದರು.
ವಿಚಾರ ವಿನಮಯ ವೇದಿಕೆಯ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ಕನಕಗಿರಿಯ ಸರ್ಕಾರಿ ಶಾರದಾ ವಿಲಾಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳಿಗೆ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರದ ಉನ್ನತಿಯ ಪ್ರತೀಕವಾದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರ ಲಾಂಛನಗಳನ್ನು ಗೌರವಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ ಎಂದರು.
ಪಾಲಿಕೆ ಸದಸ್ಯ ಮ.ವಿ.ರಾಮ್‌ಪ್ರಸಾದ್ ಮಾತನಾಡಿ, ದೇಶಾದ್ಯಂತ ಪ್ಲಾಸ್ಟಿಕ್ ಮತ್ತು ಕಾಗದದಲ್ಲಿ ತಯಾರಿಸಿದ್ದ ತ್ರಿವರ್ಣ ಧ್ವಜದ ಬಳಕೆ ಮತ್ತು ಮಾರಾಟ ಮಾಡದಂತೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಮಾಡಿದರೆ. ಆದರೂ, ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜಗಳ ಬಳಕೆ ಮತ್ತು ಮಾರಾಟ ನಿಲ್ಲುವಂತೆ ಕಾಣುತ್ತಿಲ್ಲ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನದಂದು ದೇಶಾದ್ಯಂತ ಸರ್ಕಾರಿ ಶಾಲಾ, ಕಾಲೇಜು, ಸಂಘ, ಸಂಸ್ಥೆಗಳಲ್ಲಿ ಶುದ್ಧ ಖಾದಿಯಿಂದ ತಯಾರಿಸಿದ ಧ್ವಜಗಳನ್ನು ಹಾರಿಸುತ್ತಾರೆ. ಆದರೆ ಶಾಲಾ ಮಕ್ಕಳ ಕೈಯಲ್ಲಿ ಹೆಚ್ಚಾಗಿ ಕಾಗದ ಅಥವಾ ಪ್ಲಾಸ್ಟಿಕ್ ನಿಂದ ತಯಾರಿಸಿದ ಧ್ವಜಗಳು ಕಂಡು ಬರುತ್ತಿದೆ. ಇದು ಈ ಬಾರಿ ತಪ್ಪಬೇಕು ಎಂದರು.
ವೇದಿಕೆಯ ಅಧ್ಯಕ್ಷ ಪುರುಷೋತ್ತಮ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ಆರ್. ನಾರಾಯಣ, ಶಾಲೆಯ ಮುಖ್ಯ ಶಿಕ್ಷಕಿ ಉಷಾ ಮತ್ತು ಜಯಲಕ್ಷ್ಮಿ ಇದ್ದರು.