

ಮೈಸೂರು: ಕೆ.ಆರ್.ಎಸ್.ರಸ್ತೆಯಲ್ಲಿರುವ ಸ್ಯಾನಿಟೋರಿಯಂ ಆವರಣಕ್ಕೆ ಸಿದ್ದರಾಮಯ್ಯ ಹೆಲ್ತ್ ಹಬ್ ಎಂದು ನಾಮಕರಣ ಮಾಡಲಾಗುವುದು ಎಂದು ಶಾಸಕ ಕೆ.ಹರೀಶ್‌ಗೌಡ ತಿಳಿಸಿದರು.
ಕೆ.ಆರ್.ಆಸ್ಪತ್ರೆಯ ನೆಪ್ರೊ ಯುರಾಲಜಿ ವಿಭಾಗ ಹಾಗೂ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಕಿಡ್ನಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದವರು ಸಿದ್ದರಾಮಯ್ಯ. ಹೀಗಾಗಿ. ಅವರ ಹೆಸರು ನಾಮಕರಣ ಮಾಡಲಾಗುವುದು. ಮೈಸೂರು ನಗರಕ್ಕೆ ಜಯದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಟ್ರಾಮಾ ಸೆಂಟರ್ ಹೆರಿಗೆ ಆಸ್ಪತ್ರೆ, ಆಯುರ್ವೇದಿಕ್ ಆಸ್ಪತ್ರೆಗಳನ್ನು ನಿರ್ಮಿಸಿ ಬಡಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಚಾಮರಾಜ ಕ್ಷೇತ್ರಕ್ಕೆ ಮೊದಲ ಬಜೆಟ್‌ನಲ್ಲೇ 700 ಕೋಟಿ ರೂ. ಅನುದಾನ ಕೊಡುವುದರ ಜತೆಗೆ 75 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಒಪಿಡಿ ನಿರ್ಮಾಣಕ್ಕೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ನಾನು ಶಾಸಕರಾಗಿ ಗೆದ್ದ ಒಂದೇ ವಾರದಲ್ಲಿ ಡಾ.ನರೇಂದ್ರ ಅವರು ಬಂದು ಐಎನ್‌ಯು ಯೂನಿಟ್ ಮೈಸೂರಿಗೆ ತರಬೇಕೆಂದು ಕೋರಿದರು. ನಾನು ಮುಖ್ಯಮಂತ್ರಿಗೆ ಮನವರಿಕೆ ಮಾಡಿದ್ದರಿಂದ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಹಣವನ್ನು ಇಟ್ಟಿದ್ದು, 3 ಎಕರೆ ಜಾಗವನ್ನೂ ಸ್ಯಾನಿಟೋರಿಯಂ ಆವರಣದಲ್ಲಿ ನೀಡಿದ್ದಾರೆ. ಈ ವರ್ಷವೇ ಅನುಮೋದನೆ ಪಡೆಯಲು ಪ್ರಯತ್ನ ಮಾಡುತ್ತೇನೆ ಎಂದರು.
ಡಾ.ಜೆ.ಬಿ. ನರೇಂದ್ರ, ಡಾ.ಎಚ್.ಪಿ ಶೋಭಾ, ಡಾ.ಶ್ರೀನಿವಾಸ್ ನಲ್ಲೂರ್, ಡಾ.ಹನುಮಂತ ಆಚಾರ್ ಜೋಷಿ, ಡಾ.ನಯಾಜ್ ಪಾಷಾ, ಡಾ.ರಾಜೇಂದ್ರ ಪ್ರಸಾದ್, ಡಾ.ಶಶಿಕಿರಣ್, ಡಾ.ಮಾನಸಾ, ಡಾ.ಸಮರ್ಥ್ ಇನ್ನಿತರರಿದ್ದರು.