ಜಾತಿ ಜನಗಣತಿಯಲ್ಲಿ ಆರಾಧ್ಯ ಸಮುದಾಯದ ಹೆಸರೇ ಇಲ್ಲ

Published on

ಮೈಸೂರು: ಸರ್ಕಾರ ನಡೆಸಿರುವ ಜಾತಿ ಜನಗಣತಿಯಲ್ಲಿ ಆರಾಧ್ಯ ಸಮುದಾಯದ ಹೆಸರೇ ಪಟ್ಟಿಯಲ್ಲಿ ಇಲ್ಲ ಎಂದು ಆರಾಧ್ಯ ಮಹಾಸಭಾ ಅಧ್ಯಕ್ಷ ನಾಗಭೂಷಣ ಆರಾಧ್ಯ ಬೇಸರ ವ್ಯಕ್ತಪಡಿಸಿದರು.

ಆರಾಧ್ಯ ಸಮುದಾಯ ಸಾವಿರಾರು ವರ್ಷಗಳಿಂದ ತನ್ನದೇ ಅದ ಪರಂಪರೆ ಹೊಂದಿದ್ದು, ರಾಜ್ಯದಾದ್ಯಂತ ಒಂದು ಲಕ್ಷ ಜನಸಂಖ್ಯೆ ಹೊಂದಿದೆ. ಹೀಗಿದ್ದರೂ ಜಾತಿವಾರು ಜನಗಣತಿಯಲ್ಲಿ ಈ ಸಮುದಾಯದ ಹೆಸರೇ ಪಟ್ಟಿಯಲ್ಲಿಲ್ಲ. ಇದರಿಂದಾಗಿ ಸಮುದಾಯ ಅನೇಕ ರೀತಿಯ ಸಮಸ್ಯೆ ಎದುರಿಸಬೇಕಾಗಿ ಬಂದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

1891ರಲ್ಲಿ ಬ್ರಿಟಿಷ್ ಸರ್ಕಾರದ ಜನಗಣತಿಯಲ್ಲಿಯೂ ಈ ಸಮುದಾಯವನ್ನು ಉಪ ಪಂಗಡಕ್ಕೆ ಸೇರಿಸಿದ ಉದಾಹರಣೆ ಇದೆ. ಅಲ್ಲದೆ 2008ರ ಜಾತಿ ಜನಗಣತಿ ವರದಿಯಲ್ಲಿಯೂ ಉಲ್ಲೇಖಿತವಾಗಿದೆ. ಹೀಗಿದ್ದರೂ ಈಗ ಪ್ರಕಟವಾಗಿರುವ ಪಟ್ಟಿಯಲ್ಲಿ ಜನಾಂಗದ ಬಗ್ಗೆ ಮಾಹಿತಿ ಇಲ್ಲ. ಇನ್ನು 2015ರಲ್ಲಿ ಕಾಂತರಾಜು ಆಯೋಗದ ಸಭೆಯಲ್ಲಿ ಸಮುದಾಯದವರು ಭಾಗವಹಿಸಿ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯಬೇಕೆಂದು ದಾಖಲೆ ಪತ್ರಗಳೊಡನೆ ಮನವಿ ಸಲ್ಲಿಸಿದ್ದೇವೆ. ಆದರೂ ಕೈಬಿಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೀೀಗಾಗಿ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತಿದ್ದು, ಒಂದು ವೇಳೆ ಉಪ ಪಂಗಡ ಎಂಬ ಪಟ್ಟಿಗೆ ಮತ್ತೆ ಸೇರಿಸದಿದ್ದಲ್ಲಿ ನ್ಯಾಯಾಲಯದ ಮೂಲಕ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭಾದ ಪದಾಧಿಕಾರಿಗಳಾದ ನಟರಾಜ ಆರಾಧ್ಯ, ವಿ.ಪಿ.ಆರಾಧ್ಯ, ಭೋಗಮಲ್ಲ ಆರಾಧ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net