

ಚಿಕ್ಕಮಗಳೂರು: ಸಾಹಿತ್ಯ ಲೋಕದಲ್ಲಿ ಅನೇಕರ ಕೃತಿಗಳಿಗೆ ಜ್ಞಾನಪೀಠ ಲಭಿಸಿಲ್ಲ ಎಂಬ ಕೊರಗಿರಬಾರದು. ಸಾಹಿತ್ಯ ದಿಗ್ಗಜರ ಹೆಸರೇ ಒಂದು ಜ್ಞಾನಪೀಠ ಪ್ರಶಸ್ತಿ ಇದ್ದಂತೆ ಎಂದು ಬಸವತತ್ವ ಪೀಠದ ಶ್ರೀ ಡಾ.ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.
ನಗರದ ಕಲ್ಯಾಣನಗರ ಸಮೀಪದ ಚನ್ನಮ್ಮ ಮರಿಯಪ್ಪ ಸಭಾಂಗಣದಲ್ಲಿ ತಾಲೂಕು ಸಿರಿಗನ್ನಡ ವೇದಿಕೆಯಿಂದ ಆಯೋಜಿಸಲಾಗಿದ್ದ ಶ್ರಾವಣ ನುಡಿಸಿರಿ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು, ಇತ್ತೀಚಿನ ಕಾಲಮಾನದಲ್ಲಿ ಸಾಹಿತ್ಯರುಚಿ ಹಾಗೂ ಕನ್ನಡಾಭಿಮಾನದ ಬೆಳವಣಿಗೆ ಕ್ಷೀಣಿಸುತ್ತಿದೆ. ನೆರೆರಾಜ್ಯದ ಪ್ರವಾಸಿಗರಿಗೆ ಕನ್ನಡವನ್ನು ಕಲಿಸುವ ಬದಲಾಗಿ, ಆ ಭಾಷೆಯಲ್ಲೇ ಉತ್ತರಿಸುವ ಪ್ರವೃತ್ತಿ ನಡೆಯುತ್ತಿದೆ. ಹೀಗಾಗಿ ಕನ್ನಡಿಗರು ಭಾಷೆಯ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಬಿಟ್ಟು ಭಾಷೆ ಬೆಳವಣಿಗೆ ಬಗ್ಗೆ ಪ್ರತಿಯೊಬ್ಬರೂ ಗಮನಕೊಡಬೇಕು ಎಂದು ಕರೆನೀಡಿದರು.
ಪೂರ್ವಜರ ಕಾಲದಲ್ಲಿ ಅನಕ್ಷರಸ್ಥತೆ ಇದ್ದರೂ ಕನ್ನಡಾಭಿಮಾನ ತುಂಬಿ ತುಳುಕುತ್ತಿತ್ತು. ಕೆಲವು ಸರಳ ಪದಗಳನ್ನು ಸ್ವಚ್ಚಂಧವಾಗಿ ಉಚ್ಚರಿಸಲಾಗುತ್ತಿತ್ತು. ಆಧುನಿಕತೆ ಬೆಳೆದಂತೆ ಭಾಷೆಯ ಸೊಗಡು ಮರೆಯಾಗುತ್ತಿದೆ. ಪ್ರತಿಯೊಂದು ಸಣ್ಣಪುಟ್ಟ ಪದಗಳು ಆಂಗ್ಲಭಾಷೆ ಆಕ್ರಮಣದಿಂದ ಕಣ್ಮರೆಯಾಗಿದೆ. ಹೀಗಾಗಿ ಮಕ್ಕಳಿಗೆ ಬಾಲ್ಯದಿಂದಲೇ ಭಾಷಾಭಿಮಾನ ಮೂಡಿಸಬೇಕು ಎಂದರು.
ಕನ್ನಡದ ನಿಘಂಟು, ಶಬ್ದಕೋಶ ಬಗ್ಗೆ ಅಧ್ಯಯನ ಹೊಂದಬೇಕು. ಅಪ್ಪ-ಅಮ್ಮ ಎನ್ನುವ ಬದಲು ಡ್ಯಾಡಿ-ಮಮ್ಮಿ, ಉಪ್ಪು-ಸಾಸಿವೆ ಬದಲಿಗೆ ಸಾಲ್ಟ್-ಮುಸ್ಟಾಡ್ ಎಂಬುದಾಗಿದೆ. ಇದೇ ರೀತಿ ಸಣ್ಣಪುಟ್ಟ ಪದಗಳು ಹರಿದಾಡದೆ ಕನ್ನಡ ಬೆಳವಣಿಗೆ ಅಸಾಧ್ಯ. ಹೀಗಾಗಿ ಕನ್ನಡವನ್ನು ದಿನಪ್ರತಿ ಧ್ಯಾನ, ಉಸಿರೆಂದು ಭಾವಿಸಿ ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿರಿಗನ್ನಡವೇದಿಕೆ ಗೌರವಾಧ್ಯಕ್ಷ ಎಂ.ಸಿ.ಶಿವಾನAದ ಸ್ವಾಮಿ, ನಮ್ಮಗಳ ಕಾಲದಲ್ಲಿ ಭಾಷೆ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಇದನ್ನು ಭವಿಷ್ಯದಲ್ಲಿ ಉಳಿಸಲು ಹಾಗೂ ಒಳಪು ಮೂಡಿಸಲು ಯುವಸಮೂಹಕ್ಕೆ ಭಾಷೆಯ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸ ಪರಿಚಯಿಸಬೇಕು ಎಂದು ಹೇಳಿದರು.
ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ಮಾತನಾಡಿ, ಭಾಷೆಯ ಆಚಾರ- ವಿಚಾರ, ಮೌಲ್ಯ ಹಾಗೂ ಸಂಸ್ಕೃತಿ ತಿಳಿಸುವ ಕಾರ್ಯದಲ್ಲಿ ವೇದಿಕೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಮಾಡುತ್ತಿದೆ. ಶ್ರಾವಣ ಸಂಜೆ ಕಾರ್ಯಕ್ರಮ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪೂರೈಸಿ ಸಮಾರೋಪವನ್ನು ಚಿಕ್ಕಮಗಳೂರು ತಾಲೂಕಿನಲ್ಲಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿರಿಗನ್ನಡ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಯ್ಯ ಮಾತನಾಡಿ, ಸಾಹಿತ್ಯದ ವಿಷಯವನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಪಾಲಕರು ಇಂಥ ಕಾರ್ಯಕ್ರಮಗಳಿಗೆ ತಾವು ಸೇರಿದಂತೆ ಮಕ್ಕಳನ್ನು ಕರೆತಂದಾಗ ಮಾತ್ರ ಸಾಹಿತ್ಯದ ಸೌಗಂಧ ಎಲ್ಲೆಡೆ ಪಸರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಸಾಹಿತಿ ಡಿ.ಎಂ.ಮAಜುನಾಥಸ್ವಾಮಿ ಅವರು ಡಿವಿಜಿ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ಕಾರ್ಯದರ್ಶಿ ಮದನ್, ಸಂಘಟನಾ ಕಾರ್ಯದರ್ಶಿ ಸುರೇಶ್ ನರ‍್ಲಿಗೆ, ಕಸಾಪ ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ.ಲೋಕೇಶ್, ಬರೋಡ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಜಗದೀಶ್ ಪ್ರಸಾದ್ ಮತ್ತಿತರರಿದ್ದರು.