ನಾಡು-ನುಡಿ ಸೇವೆ ಸ್ಮರಣೀಯ

h18-hampana
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಜೆ.ಜಿ. ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದಲ್ಲಿ ವಿಶೇಷ ವಿಚಾರ ಸಂಕಿರಣ ಹಾಗೂ ಇತ್ತೀಚೆಗೆ ನಿಧನರಾದ ನಾಡೋಜ ಡಾ. ಕಮಲಾ ಹಂಪನಾ, ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಕೂರ ಆನಂದ ಹಾಗೂ ನಿರೂಪಕಿ ಅಪರ್ಣಾ ವಸ್ತಾರೆ ಅವರಿಗೆ ನುಡಿನಮನ ಕಾರ್ಯಕ್ರಮ ಗುರುವಾರ ಏರ್ಪಡಿಸಲಾಗಿತ್ತು.
ಹಾವೇರಿಯ ಜೆ.ಎಚ್. ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಜಗದೀಶ ಎಫ್. ಹೊಸಮನಿ ಮಾತನಾಡಿ, ಕನ್ನಡ ನಾಡಿಗೆ ಈ ಮೂವರ ಅಗಲಿಕೆಯಿಂದ ನಷ್ಟವಾಗಿದೆ. ತಮ್ಮ ಜೀವಿತಾವಧಿಯನ್ನು ನಾಡು-ನುಡಿ ಸೇವೆಗೆ ಮುಡುಪಾಗಿಟ್ಟಿದ್ದರು.
ಆ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಎನ್ನುವುದು ಕನಸಿನ ಮಾತಾಗಿತ್ತು. ಅಂತಹ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದವರು ಕಮಲಾ ಹಂಪನಾ. ಕನ್ನಡ ಸಾಹಿತ್ಯಕ್ಕೆ ಸುಮಾರು ಅರವತ್ತು ಕೃತಿ ಕೊಟ್ಟಿರುವುದು ಹೆಮ್ಮೆಯ ವಿಚಾರ. ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲಕ್ಕೂರ ಆನಂದ ಅವರ ಕೊಡುಗೆಯೂ ಅಪಾರವಾಗಿದೆ. ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಅವರಿಲ್ಲದ್ದಿರೂ ಅವರ ಧ್ವನಿ ಚಿರಂತನವಾಗಿದೆ ಎಂದು ಸ್ಮರಿಸಿದರು.
ಪದವಿ ಪ್ರಾಚಾರ್ಯ ಪ್ರೊ.ಎಸ್.ಎಲ್. ಪಾಟೀಲ ಮಾತನಾಡಿ, ಇಂಥವರ ವ್ಯಕ್ತಿತ್ವದ ಪರಿಚಯ ನಮ್ಮ ಮಕ್ಕಳಿಗೆ ಆಗಬೇಕು ಎನ್ನುವುದು ಈ ಕಾರ್ಯಕ್ರಮ ಉದ್ದೇಶವೆಂದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನೇತ್ರಾವತಿ ಗಬ್ಬೂರ ಸ್ವಾಗತಿಸಿದರು. ಪ್ರೊ. ಮಲ್ಲಮ್ಮ ಯಾಟಗಲ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಅಶ್ವಿನಿ ಹೂವಿನವರ ವಂದಿಸಿದರು. ಪ್ರೊ. ಪ್ರತಿಭಾ ಕೆ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net