ದಶಕಗಳ ಕಾಲ ವೈಭವ ಮೆರೆದ ಎನ್​ಜಿಇಎಫ್

h9- NGEF 3
Published on

ಬಸವರಾಜ ಇದ್ಲಿ ಹುಬ್ಬಳ್ಳಿ

ಇದು ಉತ್ತರ ಕರ್ನಾಟಕದ ಏಕೈಕ ಸರ್ಕಾರಿ ಸ್ವಾಮ್ಯದ ಸಂಸ್ಥೆ. ಮೂರು ದಶಕಗಳವರೆಗೆ ಅತ್ಯಂತ ಉತ್ತುಂಗದಲ್ಲಿದ್ದು, ಕಂಪನಿಯ ಎಲೆಕ್ಟ್ರಿಕ್ ಮೋಟಾರ್​ಗಳಿಗೆ ದೇಶಾದ್ಯಂತ ಬೇಡಿಕೆ ಸೃಷ್ಟಿಸಿ ವೈಭವ ಮೆರೆಯಿತು. ಅದುವೇ ಹುಬ್ಬಳ್ಳಿಯ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್​ಜಿಇಎಫ್).

ಆರಂಭದಲ್ಲಿ ಕೈಗಾರಿಕೆಗಳ ಸಂಬಂಧಿ ಎಲೆಕ್ಟ್ರಿಕ್ ಮೋಟಾರ್ ತಯಾರಿಸುತ್ತಿದ್ದ ಎನ್​ಜಿಇಎಫ್ ಇದೀಗ ವಿದ್ಯುತ್ ಪರಿವರ್ತಕ (ಟಿಸಿ) ಉತ್ಪಾದನೆ ಹಾಗೂ ದುರಸ್ತಿ ಕಾರ್ಯ ಕೈಗೊಂಡು ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.

ಉತ್ತಮ ಗುಣಮಟ್ಟದ ಉತ್ಪಾದನೆಗೆ ದೇಶದ ಎಲ್ಲೆಡೆ ಹೆಸರು ಗಳಿಸಿರುವ ಕಂಪನಿಯು ಇದೀಗ ನಾನಾ ಕಾರಣಗಳಿಗೆ ಸೋತು ಹೋಗಿದೆ. ಸರ್ಕಾರ ಪ್ರಾಣವಾಯು ಒದಗಿಸಿ ಸಂರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ.

ಎನ್​ಜಿಇಎಫ್ ಇತಿಹಾಸ: ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ ಅವರ ಪ್ರಯತ್ನದ ಫಲವೇ ಎನ್​ಜಿಇಎಫ್. ಸದಾ ಉತ್ತರ ಕರ್ನಾಟಕದ ಅಭಿವೃದ್ಧಿಯ ತುಡಿತ ಹೊಂದಿದ್ದ ಅವರು, 1984ರಲ್ಲಿ ಈ ಭಾಗಕ್ಕೆ ಸಾರ್ವಜನಿಕ ಉದ್ದಿಮೆಯಾದ ಎನ್​ಜಿಇಎಫ್ ತರುವಲ್ಲಿ ಮುತುವರ್ಜಿ ವಹಿಸಿದರು. ಅವರ ನಿಗಾದಲ್ಲಿ ಬೆಳೆದ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿ 300ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟಿದ್ದಲ್ಲದೆ, ಪರೋಕ್ಷವಾಗಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿತು.

1984ರಲ್ಲಿ ಗೋಕುಲ ರೋಡ್ ಕೈಗಾರಿಕಾ ವಸಾಹತುವಿನಲ್ಲಿ ಕಾರ್ಯಾರಂಭ ಮಾಡಿದ ಎನ್​ಜಿಇಎಫ್​ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ರಾಯಾಪುರ ಬಳಿ 10 ಎಕರೆ ಜಾಗ ನೀಡಿತು. 1986ರಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಎಸ್.ಆರ್. ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಕೈಗಾರಿಕಾ ಸಚಿವ ದಿ. ಜೆ.ಎಚ್. ಪಟೇಲ್ ಅವರು ಘಟಕ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 1988ರಲ್ಲಿ ಕಟ್ಟಡ ಪೂರ್ಣಗೊಂಡ ನಂತರ ಅಂದಿನ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರು ಎನ್​ಜಿಇಎಫ್ ಘಟಕದ ಉದ್ಘಾಟನೆ ನೆರವೇರಿಸಿದ್ದರು.

ಅಂಗಸಂಸ್ಥೆ: ಬೆಂಗಳೂರು ಎನ್​ಜಿಇಎಫ್​ನ ಅಂಗಸಂಸ್ಥೆಯಾಗಿ ಬೆಳೆದ ಹುಬ್ಬಳ್ಳಿ ಘಟಕ ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಪಡೆಯಿತು. ಪ್ರಸ್ತುತ ಬೆಂಗಳೂರು ಘಟಕ ಬಾಗಿಲು ಮುಚ್ಚಿದೆ. ಆದರೆ, ಹುಬ್ಬಳ್ಳಿ ಎನ್​ಜಿಇಎಫ್ ಈಗಲೂ ಕಾರ್ಯನಿರ್ವಹಣೆ ಮಾಡುತ್ತಿದ್ದು, ಒಂದಿಷ್ಟು ಉತ್ತೇಜನ ನೀಡಿದರೆ ಮತ್ತೆ ತನ್ನ ವೈಭವ ಮೆರೆಯುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯಪಡುತ್ತಾರೆ.

ಸದ್ಯ 202 ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಮಾದರಿಯ ಇಂಡಕ್ಷನ್ ಮೋಟಾರ್ ಹಾಗೂ ಟಿಸಿ ಉತ್ಪಾದನೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದಲ್ಲಿ ಮುಖ್ಯ ಶಾಖೆ, ಬೆಳಗಾವಿ, ಕೊಪ್ಪಳ, ತರಿಕೆರೆ, ಮಂಗಳೂರುಗಳಲ್ಲಿ ಟ್ರಾನ್ಸ್​ಫಾರ್ಮರ್ ದುರಸ್ತಿ ಕೇಂದ್ರಗಳನ್ನು ಆರಂಭಿಸಿದೆ. ದೆಹಲಿ, ಕೊಲ್ಕತಾ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಸರ್ವಿಸ್ ಹಾಗೂ ಸೇಲ್ಸ್ ಆಫೀಸ್​ಗಳನ್ನು ತೆರೆಯಲಾಗಿದೆ. ಇಸ್ರೋ, ಭಾರತೀಯ ರೈಲ್ವೆ, ಎಸ್ಕಾಂಗಳು, ಎನ್​ಟಿಪಿಸಿ, ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್, ಎಚ್​ಎಂಟಿ, ಕೈಗಾ ಮುಂತಾದ ಪ್ರಮುಖ ಕಂಪನಿಗಳು ಎನ್​ಜಿಇಎಫ್​ನ ಗ್ರಾಹಕರಾಗಿದ್ದಾರೆ.

ಭವಿಷ್ಯದ ಯೋಜನೆಗಳು: ಟಿಸಿ ಉತ್ಪಾದನೆ ಹಾಗೂ ದುರಸ್ತಿ ಕಾರ್ಯವನ್ನು ವಿವಿಧ ಎಸ್ಕಾಂಗಳ ವ್ಯಾಪ್ತಿಗೂ ವಿಸ್ತರಿಸುವುದು, ಎಸ್ಕಾಂಗಳಿಗೆ ಅಗತ್ಯವಿರುವ ವಿವಿಧ ಮಾದರಿಯ ಟಿಸಿಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವುದು, ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿ ವ್ಯವಹಾರ ಅಭಿವೃದ್ಧಿಪಡಿಸಿ ಇನ್ನಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು- ಇದು ಎನ್​ಜಿಇಎಫ್ ಗುರಿಯಾಗಿದೆ. ದೀರ್ಘಾವಧಿಯಲ್ಲಿ ಇನ್ನೂ ಹೆಚ್ಚಿನ ಉತ್ಪಾದನೆ ಕೈಗೊಳ್ಳಲು ಇಲ್ಲಿ ಜಾಗವೂ ಇದೆ. ಎನ್​ಜಿಇಎಫ್ ಮೋಟಾರ್​ಗಳಿಗಿರುವ ಬೇಡಿಕೆಗೆ ತಕ್ಕಂತೆ ಮಾನವ ಸಂಪನ್ಮೂಲ, ಮೂಲ ಸೌಲಭ್ಯ ಒದಗಿಸಿದರೆ ಹೆಚ್ಚಿನ ಸಾಧನೆ ಮಾಡಬಹುದು. ಗ್ರೀನ್ ಟ್ರಾನ್ಸ್​ಫಾರ್ಮರ್, ಸೋಲಾರ್ ಪ್ರೊಜೆಕ್ಟ್​ಗಳಿಗೆ ಸ್ಟೆಪ್ ಅಪ್ ಟ್ರಾನ್ಸ್​ಫಾರ್ಮರ್ ಉತ್ಪಾದನೆ ಮಾಡಬಹುದಾಗಿದೆ. ಸರ್ಕಾರಕ್ಕೂ ಒಳ್ಳೆಯ ಹೆಸರು ಬರಲಿದೆ. ಇದಕ್ಕಾಗಿ ಆಟೋಮ್ಯಾಟಿಕ್ ಎಚ್​ವಿ, ಎಲ್​ವಿ ಕಾಯಿಲ್ ವೈಂಡಿಂಗ್ ಮಶೀನ್, ಓವೆನ್, ಓವರ್ ಹೆಡ್ ಕ್ರೇನ್ಸ್, ಫೋರ್ಕ್ ಲಿಫ್ಟ್, ಪೇಂಟಿಂಗ್ ಬೂತ್, ಶೀಟ್ ಶೇರಿಂಗ್ ಮಶೀನ್, ಸಿಒಟು ವೆಲ್ಡಿಂಗ್ ಮಶೀನ್, ಪ್ರೆಶರ್ ಟೆಸ್ಟಿಂಗ್ ಮಶೀನ್, ಡೈ ಕಾಸ್ಟಿಂಗ್, ಹೈ ಟೆಕ್ ಟೆಸ್ಟಿಂಗ್ ಸೆಂಟರ್, ಇನ್ನೊವೇಟಿವ್ ಸಾಫ್ಟವೇರ್ ಹೀಗೆ ಆಧುನಿಕ ಸೌಲಭ್ಯಗಳ ಅವಶ್ಯಕತೆ ಇದೆ. ಈ ಎಲ್ಲ ಕಾರ್ಯಗಳಿಗೆ ರಾಜ್ಯ ಸರ್ಕಾರ ಹಣಕಾಸಿನ ನೆರವು ನೀಡಬೇಕಿದೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net