ಕುದುರೆ ಲಾಯವಾದ ಮೈಸೂರಿನ ಸ್ವಾಗತ ಕಮಾನು

heritage building (1)
Published on

ಸದೇಶ್ ಕಾರ್ಮಾಡ್ ಮೈಸೂರು
ಬೆಂಗಳೂರಿನಿಂದ ಮೈಸೂರು ನಗರಕ್ಕೆ ಪ್ರವೇಶಿಸುತ್ತಿದ್ದಂತೆಯೇ ಕಾಣಸಿಗುವ ಸರ್ಕಾರಿ ಅತಿಥಿ ಗೃಹದ ಸುಂದರ ಸ್ವಾಗತ ಕಮಾನು ಇದೀಗ ಕುದುರೆ ಲಾಯವಾಗಿ ಮಾರ್ಪಡು ಹೊಂದಿದೆ. ಇದು ಪಾರಂಪರಿಕ ಕಟ್ಟಡಗಳ ದುಸ್ಥಿತಿಗೆ ಸಾಕ್ಷಿಯಾಗಿದೆ.
ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಮೈಸೂರು ವಿಶಿಷ್ಟವಾದ ಸ್ಥಾನ ಪಡೆಯಲು ನಗರದ ಭವ್ಯ ಪರಂಪರೆ ಕಾರಣ. ಇಲ್ಲಿರುವ ನೂರಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳು ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ಆದರೆ, ಆಡಳಿತ ವರ್ಗದ ನಿರ್ಲಕ್ಷೃದಿಂದ ಪಾರಂಪರಿಕ ಕಟ್ಟಡಗಳು ಸಂಪೂರ್ಣ ದುಸ್ಥಿತಿಗೆ ತಲುಪಲು ಪ್ರಾರಂಭವಾಗಿದೆ. ಇದಕ್ಕೊಂದು ತಾಜಾ ಉದಾಹರಣೆ ನಗರದ ಸರ್ಕಾರಿ ಅತಿಥಿ ಗೃಹದ ಸ್ವಾಗತ ಕಮಾನು.

ಈ ಸ್ವಾಗತ ಕಮಾನು ಈ ಹಿಂದೆ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಇತ್ತು. ರಸ್ತೆ ವಿಸ್ತರಣೆ ಸಂದರ್ಭ ಪಾರಂಪರಿಕ ಕಟ್ಟಡ ಎಂಬ ಕಾರಣಕ್ಕೆ ಸ್ವಾಗತ ಕಮಾನನ್ನು ಉಳಿಸಿಕೊಳ್ಳಲಾಯಿತು. ಇದೀಗ ಈ ಸ್ವಾಗತ ಕಮಾನು ಎರಡು ರಸ್ತೆಯ ಮಧ್ಯದಲ್ಲಿ ಇದೆ. ಬೆಂಗಳೂರಿನಿಂದ ನಗರಕ್ಕೆ ಆಗಮಿಸುವವರನ್ನು ಮೊದಲು ಗಮನ ಸೆಳೆಯುವುದೇ ಈ ಸ್ವಾಗತ ಕಾಮಾನು. ಸ್ವಾಗತ ಕಮಾನಿನ ವಿನ್ಯಾಸ ಪ್ರತಿಯೊಬ್ಬರನ್ನೂ ಸೆಳೆಯುವ ರೀತಿಯಲ್ಲಿ ಇದ್ದು, ನಗರದ ಸೌಂದರ್ಯ ವೃದ್ಧಿಗೆ ಹಾಗೂ ಪರಂಪರೆಯ ಹಿರಿಮೆ ಎತ್ತಿ ಹಿಡಿಯಲು ಪೂರಕವಾಗಿದೆ. ಇಷ್ಟೊಂದು ಸುಂದರವಾದ ಸ್ವಾಗತ ಕಮಾನನ್ನು ಉಳಿಸಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದರೆ, ಇದರ ಮೌಲ್ಯ ಅರಿಯದ ಕೆಲವರು ಸ್ವಾಗತ ಕಮಾನನ್ನು ಇದೀಗ ಕುದುರೆ ಲಾಯವಾಗಿ ಮಾರ್ಪಾಡು ಮಾಡಿದ್ದಾರೆ. ಸಂಜೆ ವೇಳೆ ಇಲ್ಲಿ ಕುದರೆಗಳನ್ನು ಕಟ್ಟಲಾಗುತ್ತಿದೆ.

ದುಸ್ಥಿತಿಯಲ್ಲಿ ಕಟ್ಟಡ

ರಸ್ತೆ ವಿಸ್ತರಣೆ ಸಂದರ್ಭ ಈ ಸ್ವಾಗತ ಕಮಾನಿನ ಸುತ್ತ ಗ್ರಿಲ್‌ಗಳನ್ನು ಅಳವಡಿಸಿ ಯಾರಿಂದಲೂ ಈ ಕಟ್ಟಡಕ್ಕೆ ಹಾನಿ ಆಗದಂತೆ ಎಚ್ಚರ ವಹಿಸಲಾಗಿತ್ತು. ಆದರೆ, ಇದೀಗ ಆ ಕಟ್ಟಡ ಅಧಿಕಾರಿಗಳ ನಿರ್ಲಕ್ಷೃಕ್ಕೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಅದರೊಳಗೆ ಯಾರು ಬೇಕಾದರೂ ಹೋಗಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಬಂಡವಾಳ ಮಾಡಿಕೊಂಡ ಕೆಲವರು ಕುದುರೆಗಳನ್ನು ಕಟ್ಟುತ್ತಿದ್ದಾರೆ. ಇದರಿಂದ ಮೊದಲೇ ದುಸ್ಥಿತಿಯಲ್ಲಿರುವ ಕಟ್ಟಡ ಮತ್ತಷ್ಟು ದುಸ್ಥಿತಿಗೆ ತಲುಪಿದೆ. ಕಟ್ಟಡದ ಗೋಡೆಗಳು ಅಲ್ಲಲ್ಲಿ ಕಿತ್ತು ಬಂದಿದೆ. ಕಟ್ಟಡದ ಮೇಲ್ಭಾಗ ದಲ್ಲಿ ಗಿಡಗಳು ಬೆಳೆದುಕೊಂಡು ಕಟ್ಟಡವನ್ನು ದುರ್ಬಲಗೊಳಿಸುತ್ತಿದೆ. ಆದಷ್ಟು ಬೇಗ ಈ ಕಟ್ಟಡದ ಸಂರಕ್ಷಣಾ ಕಾರ್ಯ ಕೈಗೊಳ್ಳದೆ ಹೋದರೆ ಕುಸಿದು ಬೀಳುವುದು ನಿಶ್ಚಿತ. ದುಸ್ಥಿತಿಯಲ್ಲಿದ್ದ ಸರ್ಕಾರಿ ಅತಿಥಿ ಗೃಹದ ಸಂರಕ್ಷಣಾ ಕಾರ್ಯ ಇದೀಗ ನಡೆಯುತ್ತಿದ್ದು, ಇದರ ಜತೆಗೆ ಈ ಸ್ವಾಗತ ಕಮಾನಿನ ಕಟ್ಟಡದ ಸಂರಕ್ಷಣಾ ಕಾರ್ಯವೂ ನಡೆಯಬೇಕಾಗಿದೆ.

ನಗರದಲ್ಲಿದೆ 4 ಸ್ವಾಗತ ಕಮಾನು

ನಗರದಲ್ಲಿ ಒಟ್ಟು 4 ಪಾರಂಪರಿಕ ಸ್ವಾಗತ ಕಮಾನುಗಳು ಇದ್ದು, ಈ ಪೈಕಿ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿರುವ ಸ್ವಾಗತ ಕಮಾನಿನ ಸಂರಕ್ಷಣಾ ಕಾರ್ಯ ನಡೆದು ಉತ್ತಮ ಸ್ಥಿತಿಯಲ್ಲಿದೆ. ಉಳಿದಂತೆ ಮಹಾರಾಣಿ ಮಹಿಳಾ ಕಾಲೇಜು (ಸದರನ್ ಸ್ಟಾರ್ ಹೋಟೆಲ್ ಮುಂಭಾಗ), ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣ ಹಾಗೂ ಸರ್ಕಾರಿ ಅತಿಥಿ ಗೃಹದ ಸ್ವಾಗತ ಕಮಾನುಗಳು ದುಸ್ಥಿತಿಯಲ್ಲಿ ಇದ್ದು, ಇವುಗಳ ಸಂರಕ್ಷಣಾ ಕಾರ್ಯ ಆಗಬೇಕಾಗಿದೆ. ನಗರದಲ್ಲಿ ಕೆಲವು ಪಾರಂಪರಿಕ ಕಟ್ಟಡಗಳು ನಿರ್ವಹಣೆಯ ಕೊರತೆಯಿ ಂದ ಈಗಾಗಲೇ ಕುಸಿದು ಬಿದ್ದಿದ್ದು, ಆ ಸಾಲಿಗೆ ಈ ಸ್ವಾಗತ ಕಾಮನು ಸೇರದೆ ಇರಲಿ ಎಂಬುದೇ ಎಲ್ಲರ ಆಶಯ.

ನಗರದಲ್ಲಿ 4 ಸ್ವಾಗತ ಕಮಾನುಗಳು ಇದ್ದು, ಈ ಪೈಕಿ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿಯ ಸ್ವಾಗತ ಕಮಾನು ಉತ್ತಮವಾಗಿ ಸಂರಕ್ಷಣೆಯಾಗಿದೆ. ಅದೇ ರೀತಿ ಉಳಿದ ಮೂರು ಸ್ವಾಗತ ಕಮಾನುಗಳ ಸಂರಕ್ಷಣೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಪ್ರಯತ್ನ ನಡೆಸಬೇಕು. ನಗರದ ಸರ್ಕಾರಿ ಅತಿಥಿ ಗೃಹ ಪಾರಂಪರಿಕ ಕಟ್ಟಡವಾಗಿದ್ದು, ಆ ಕಟ್ಟಡದ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಆ ಕಟ್ಟಡದ ಒಂದು ಭಾಗವಾಗಿರುವ ಸ್ವಾಗತ ಕಮಾನಿನ ಕಟ್ಟಡ ಮೊದಲೇ ದುಸ್ಥಿತಿಗೆ ತಲುಪಿದೆ. ಆ ಕಟ್ಟಡದಲ್ಲಿ ಕುದುರೆಗಳನ್ನು ಕಟ್ಟಿದರೆ ಕಟ್ಟಡ ಮತ್ತಷ್ಟು ದುಸ್ಥಿತಿಗೆ ತಲುಪಿದೆ. ಕೂಡಲೇ ಕುದುರೆಗಳನ್ನು ಸ್ಥಳದಿಂದ ತೆರವುಗೊಳಿಸಿ ಕಟ್ಟಡವನ್ನು ಸಂರಕ್ಷಿಸುವಂತೆ ಪಾಲಿಕೆ ಅಧಿಕಾರಿಗಳಲ್ಲಿ ಮನವಿ ಮಾಡಲಾಗುವುದು.
ಡಾ.ಎನ್.ಎಸ್. ರಂಗರಾಜು, ಸದಸ್ಯ, ಪಾರಂಪರಿಕ ಸಮಿತಿ

ನಗರ ವ್ಯಾಪ್ತಿಯೊಳಗೆ ಇರುವ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಗರ ಪಾಲಿಕೆಯ ಮೇಲೆಯೂ ಇದೆ. ಅತಿಥಿ ಗೃಹದ ಸ್ವಾಗತ ಕಮಾನನ್ನು ಕುದುರೆ ಲಾಯವಾಗಿ ಪರಿವರ್ತಿಸಿರುವ ಕುರಿತು ನನಗೆ ಮಾಹಿತಿ ಇಲ್ಲ. ಯಾವುದೇ ಕಾರಣಕ್ಕೂ ಸ್ವಾಗತ ಕಮಾನನ್ನು ಕುದುರೆ ಲಾಯವಾಗಿ ಪರಿವರ್ತಿಸಲು ಅವಕಾಶ ಮಾಡಿಕೊಡುವುದಿಲ್ಲ. ಅಧಿಕಾರಿಗಳಿಗೆ ಈ ಬಗ್ಗೆ ಕೂಡಲೇ ನಿರ್ದೇಶನ ನೀಡಿ ಇನ್ನು ಮುಂದೆ ಸ್ವಾಗತ ಕಮಾನಿನಲ್ಲಿ ಕುದುರೆಗಳನ್ನು ಕಟ್ಟಿ ಹಾಕಲು ಅವಕಾಶ ಮಾಡಿಕೊಡುವುದಿಲ್ಲ. ಈ ಸ್ವಾಗತ ಕಮಾನು ದುಸ್ಥಿತಿಗೆ ತಲುಪಿದ್ದು, ಅದರ ಸಂರಕ್ಷಣಾ ಕಾರ್ಯವನ್ನು ನಗರ ಪಾಲಿಕೆ ವತಿಯಿಂದಲೇ ಕೈಗೆತ್ತಿಕೊಳ್ಳಲಾಗುವುದು.
ಶಿವಕುಮಾರ್, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net