

ಮೈಸೂರು: ಬಹುತೇಕ ಗೃಹ ನಿರ್ಮಾಣ ಸಹಕಾರ ಸಂಘಗಳು ಆರ್ಥಿಕವಾಗಿ ಹೆಚ್ಚು ಸದೃಢವಾಗಿಲ್ಲವಾದ್ದರಿಂದ ಅಂತಹ ಸಂಘಗಳಿಗೆ ಬಡಾವಣೆ ನಿರ್ಮಾಣಕ್ಕೆ ಸರ್ಕಾರವೇ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಗೊಂಡು ಭೂಮಿ ನೀಡಲು ಮುಂದಾಗಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಒತ್ತಾಯಿಸಿದರು.
ನಗರದ ಆಲಮ್ಮ ಭಾನುವಾರ ಹಮ್ಮಿಕೊಂಡ ದಿ ಮೈಸೂರು ಸಿಟಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಶತಮಾನೋತ್ಸವ ಸಮಾರಂ ಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಬಡ ವರ್ಗದವರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುವ ಕಾರ್ಯ ಮಾಡಬೇಕು. ಆದರೆ, ಸರ್ಕಾರ ಮಾಡಬೇಕಾದ ಕೆಲಸವನ್ನು ಗೃಹ ನಿರ್ಮಾಣ ಸಹಕಾರ ಸಂಘಗಳು ಮಾಡುತ್ತಿವೆ. ನಗರದಲ್ಲಿ ಈ ಹಿಂದೆ ಹಲವಾರು ಗೃಹ ನಿರ್ಮಾಣ ಸಹಕಾರ ಸಂಘಗಳು ಬಡಾವಣೆ ನಿರ್ಮಾಣ ಮಾಡಿ ಕಡಿಮೆ ದರದಲ್ಲಿ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಿವೆ. ಆದರೆ, ರಿಯಲ್ ಎಸ್ಟೇಟ್ ಉದ್ಯಮ ಪ್ರಾರಂಭವಾದ ನಂತರ ಸಂಘಗಳಿಗೆ ಭೂಮಿ ಖರೀದಿಸಿ ಬಡಾವಣೆ ನಿರ್ಮಿಸುವ ಶಕ್ತಿ ಇಲ್ಲದಂತಾಗಿದೆ. ಹಾಗಾಗಿ ಸರ್ಕಾರವೇ ಇಂತಹ ಸಂಘಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದರು.
ಮಾಜಿ ಸಚಿವ ಸಿ.ಎಚ್. ವಿಜಯ ಶಂಕರ್ ಸಂಘದ ಶಿಲಾಫಲಕವನ್ನು ಅನಾವರಣಗೊಳಿಸಿದರು. ವೇದಿಕೆಯಲ್ಲಿ ಶಾಸಕ ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್, ಸಹಕಾರ ಸಂಘಗಳ ಉಪ ನಿಬಂಧಕ ಜಿ.ಆರ್. ವಿಜಯ್ ಕುಮಾರ್, ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ, ಉಪಾಧ್ಯಕ್ಷ ಕೆ.ಜಿ. ಶಂಕರನಾರಾಯಣ ಶಾಸ್ತ್ರಿ, ಹಿರಿಯ ಸದಸ್ಯರಾದ ರೇವಣ್ಣ, ಆರ್. ಬಾಬು, ಕಾರ್ಯದರ್ಶಿ ಬಿ.ಎಸ್. ಶ್ರೀನಾಥ್, ಉದ್ಯಮಿಗಳಾದ ನಾಗೇಂದ್ರ ಪ್ರಸಾದ್, ಯಶಸ್ವಿನಿ ಸೋಮಶೇಖರ್ ಹಾಗೂ ಇತರರು ಇದ್ದರು.