

ನವೀನ್ ಶೆಟ್ಟಿ ಕೆರಾಡಿ ಆನೇಕಲ್
ಬೆಂಗಳೂರು ನಗರ ಜಿಲ್ಲೆಯ ಏಕೈಕ ಜಲಪಾತ ಎನಿಸಿರುವ ಆನೇಕಲ್ನ ಮುತ್ಯಾಲಮಡು ಕಿರು ಜಲಪಾತ ದುಮ್ಮಿಕ್ಕಿ ಹರಿಯುತ್ತಿದೆ.
ಒಂದು ತಿಂಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಪಾತದಿಂದ ಜುಳುಜುಳು ನೀರು ಹರಿಯುತ್ತಿರುವುದು ಪ್ರವಾಸಿಗರ ಕಣ್ಣಿಗೆ ಮುದ ನೀಡುತ್ತಿದೆ. ಆನೇಕಲ್ನಿಂದ ಸುಮಾರು 5 ಕಿಲೋ ಮೀಟರ್ ದೂರದಲಿರುವ ಮುತ್ಯಾಲಮಡು ಜಲಪಾತ ಭೂಮಿಯಿಂದ 100 ಮೀಟರ್ ಆಳದಲ್ಲಿದ್ದು, 279 ರಿಂದ 300 ಮೆಟ್ಟಿಲು ಇಳಿದು ಹೋಗಬೇಕು. ಸುತ್ತಲೂ ಹಸಿರು ವಾತಾವರಣವಿದ್ದು, ಮೇಲ್ಭಾಗದಲ್ಲಿ ಒಂದು ಚೆಕ್ ಡ್ಯಾಮ್ ನಿರ್ಮಿಸಲಾಗಿದೆ. ಮೇಲಿನಿಂದ ನೀರು ಬಂಡೆಗಳ ಮೇಲೆ ಹರಿದು ಬೀಳುವಾಗ ಮುತ್ತಿನಂತೆ ಕಂಗೊಳಿಸುವ ಕಾರಣ ಮುತ್ಯಾಲಮಡು ಎಂಬ ಹೆಸರು ಬಂದಿದೆ. ಪ್ರವಾಸಿಗರು ನೀರಿನಲ್ಲಿ ಇಳಿದು ಬಂಡೆಗೆ ಮೈ ಒಡ್ಡಿದಾಗ ಸಿಗುವ ಆನಂದ ವರ್ಣಿಸಲಸಾಧ್ಯ, ಎದೆ ಮಟ್ಟಕ್ಕೆ ನೀರು ನಿಂತು ಜಲಪಾತದಲ್ಲಿ ಮಿಂದ ಅನುಭವ ಕಟ್ಟಿ ಕೊಡುತ್ತದೆ. ಮೇಲಿನಿಂದ ಬೀಳುವ ನೀರು ಅಲ್ಲಿಂದ ಹರಿದು ಎರಡು ಬೆಟ್ಟಗಳ ನಡುವೆ ಸಾಗಿ ಶಂಖ, ಚಕ್ರ, ಆನೆ ಮಡು ದಾಟಿ ತಮಿಳುನಾಡು ಸೇರುತ್ತದೆ.
ಈ ಹಿಂದೆ ೇತ್ರದಿಂದ ಗೆಲುವು ಸಾಧಿಸಿದ್ದ ಈಗಿನ ಕೇಂದ್ರದ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಡ್ಯಾಮ್ ನಿರ್ಮಾಣ ಮಾಡಿ ತಮಿಳುನಾಡಿಗೆ ಹರಿಯುವ ನೀರು ತಡೆದು ಆನೇಕಲ್ ತಾಲೂಕಿಗೆ ಹರಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ನಂತರದ ದಿನಗಳಲ್ಲಿ ಇದನ್ನು ಕೈಬಿಡಲಾಯಿತು. ಮುತ್ಯಾಲಮಡುವಿನ ನೀರು ಬೀಳುವ ಜಲಪಾತದ ಸಮೀಪದಲ್ಲೇ ಶಿವನ ದೇವಾಲಯವಿದ್ದು, ಸ್ವಲ್ಪ ದೂರ ಸಮತಟ್ಟಾದ ನೆಲವಿದೆ, ಪ್ರವಾಸಿಗರು ಅಲ್ಲಿ ಕುಳಿತುಕೊಳ್ಳಲು ಕಲ್ಲುಗಳನ್ನು ಹಾಸಲಾಗಿದೆ, ೋಟೋ ತೆಗೆದುಕೊಳ್ಳಲು ಸ್ಟುಡಿಯೋ ರಚಿಸಿದ್ದು ಸರಿಯಾದ ನಿರ್ವಹಣೆ ಇಲ್ಲದೆ ಗಿಡ ಗಂಟಿಗಳು ಬೆಳೆದು ನಿಂತಿವೆ.
ಹಸಿರು ಕಣ್ತುಂಬಿಸಿ ಕೊಳ್ಳಲು ವೀವ್ ಪಾಯಿಂಟ್ : ಕಾಡು ಕಣ್ತುಂಬಿಸಿ ಕೊಳ್ಳಲು ವೀವ್ ಪಾಯಿಂಟ್ ನಿರ್ಮಣ ಮಾಡಲಾಗಿದ್ದು, ವ್ಯೂ ಪಾಯಿಂಟ್ನಲ್ಲಿ ನಿಂತಾಗ ಮೈಲಿಗಟ್ಟಲೆ ಬೆಳೆದು ನಿಂತ ಕಾಡು ಕಣ್ಮನ ಸೆಳೆಯುತ್ತದೆ, ಮರ, ಗಿಡಗಳು ಇದ್ದ ಮೇಲೆ ಮಂಗಗಳೂ ತುಂಬಾನೇ ಇವೆ. ಸ್ವಲ್ಪ ಎಚ್ಚರಿಕೆ ಬೇಕು. ಮಳೆ ನೀರು ಪಾಚಿ ಕಾರಣ ಜಾರುವಿಕೆ ಇದ್ದು ಮುಂಜಾಗ್ರತೆ ವಹಿಸಬೇಕು.
ಎಚ್ಚರಿಕೆ ಕ್ರಮಗಳು
1. ಜಲಪಾತದ ಬಂಡೆ ಏರಿ ಹುಚ್ಚಾಟ ಮಾಡಬಾರದು. ಇದರಿಂದಾಗಿ ಜಾರಿ ಬೀಳುವ ಸಾಧ್ಯತೆ ಇದೆ.
2. ಮೇಲಿನಿಂದ ನೀರು ಬೀಳುವ ಜಾಗದಲ್ಲಿ ನಿಲ್ಲುವುದರಿಂದ ಅಪಾಯ ಹೆಚ್ಚು, ಹಾಗಾಗಿ ನೀರು ಕಡಿಮೆ ಇರುವ ಸ್ಥಳದಲ್ಲಿ ನಿಂತು ಆಟ ಆಡುವುದು ಯೋಗ್ಯ.
3. ಸದ್ಯ ಮಳೆ ಆಗುತ್ತಿರುವುದರಿಂದ ಮೆಟ್ಟಿಲುಗಳ ಮೇಲೆ ಹಿಡಿಯುವಾಗ ಹಾಗೂ ಹತ್ತಿ ಬರುವಾಗ ಜಾಗೃತೆ ವಹಿಸಬೇಕು.
4. ಕಲ್ಲುಗಳ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಎಚ್ಚರ ತಪ್ಪಬಾರದು.
5. ಮೇಲಿನಿಂದ ಬಂಡೆಗಳ ಸಂಧಿಯಲ್ಲಿ ಕೆಳಗೆ ಇಳಿಯಲು ಹೋಗುತ್ತಾರೆ. ಇದರಿಂದಾಗಿ ಅವಗಡಗಳು ಸಂಭವಿಸುವ ಸಾಧ್ಯತೆ ಇದೆ.