ಯುವತಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ ಯುವಕನ ಕೊಲೆ

Sandeep
ಸಂದೀಪ್
Published on

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಲ ಸನಿಹದ ಕಜಂಪಾಡಿಯಲ್ಲಿ ಸಂಬಂಧಿ ಯುವತಿಗೆ ದೂರವಾಣಿ ಮೂಲಕ ಕಿರುಕುಳ ನೀಡುತ್ತಿದ್ದುದನ್ನು ಪ್ರಶ್ನಿಸಿದ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಮಧೂರು ಅರಂತೋಡಿನ ಬನ್ನೂರು ನಿವಾಸಿ ಸಂಜೀವ-ಸುಮತಿ ದಂಪತಿ ಪುತ್ರ ಸಂದೀಪ್(30) ಕೊಲೆಯಾದವರು.

ಪ್ರಕರಣಕ್ಕೆ ಸಂಬಂಧಿಸಿ ಪೆರ್ಲ ಕಜಂಪಾಡಿಯ ಚಂದ್ರ ಹಾಗೂ ಆತನ ಪುತ್ರ ಪವನರಾಜ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಸಂದೀಪ್ ಅವರ ತಾಯಿಯ ಸಹೋದರಿ ಮನೆ ಕಜಂಪಾಡಿಯಲ್ಲಿದ್ದು, ತನ್ನ ಚಿಕ್ಕಮ್ಮನ ಮಗಳಿಗೆ ಪವನರಾಜ್ ಫೋನ್ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಬಗ್ಗೆ ದೂರು ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಿಸಲು ಸಂದೀಪ್ ಭಾನುವಾರ ಸಂಜೆ ಕಜಂಪಾಡಿಗೆ ಆಗಮಿಸಿ ಪವನರಾಜ್ ಜತೆ ಮಾತಿನ ಚಕಮಕಿ ನಡೆಸಿರುವುದಲ್ಲದೆ, ಪರಸ್ಪರ ಬಡಿದಾಡಿಕೊಂಡಿದ್ದರು. ಪವನ್‌ರಾಜ್‌ಗೆ ಸಂದೀಪ್ ಹಾಗೂ ಅವರ ಸಹೋದರನಿಗೆ ಬಲವಾಗಿ ಥಳಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ತನ್ನನ್ನು ಹಾಗೂ ಸಹೋದರನನ್ನು ನಿರಂತರ ಹೊಡೆದಿರುವುದರಿಂದ ಕುಪಿತಗೊಂಡ ಪವನರಾಜ್ ಮನೆಯೊಳಗಿಂದ ಚಾಕು ತಂದು ಸಂದೀಪ್‌ಗೆ ಇರಿದಿರುವುದಾಗಿ ಮಾಹಿತಿಯಿದೆ. ಗಂಭೀರ ಗಾಯಗೊಂಡ ಸಂದೀಪ್‌ನನ್ನು ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸೋಮವಾರ ಮೃತಪಟ್ಟಿದ್ದಾರೆ.

ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಅದಿಕಾರಿಗಳು, ಬೆರಳಚ್ಚು ತಂಡ ಆಗಮಿಸಿ ಮಾಹಿತಿ ಸಂಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net