

ಮೈಸೂರು: ಉದಯಗಿರಿ ಬಳಿಯ ಶಾಂತಿನಗರದಲ್ಲಿ ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಗುರುವಾರ ರಾತ್ರಿ ಯುವಕನನ್ನು ನಾಲ್ವರು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಶಾಂತಿನಗರ ನಿವಾಸಿ ಜಾವೀದ್ ಖಾನ್ ಎಂಬವರ ಪುತ್ರ ಅರ್ಬಾಜ್ ಖಾನ್(18) ಕೊಲೆಯಾದವ. ಅದೇ ಬಡಾವಣೆಯ ನಿವಾಸಿಗಳಾದ ಶಾದಿಲ್, ಶಹಬಾಜ್, ಶೋಯಬ್ ಮತ್ತು ಸಾಹಿಲ್ ಬಂಧಿತ ಆರೋಪಿಗಳು.
ಕ್ಷುಲ್ಲಕ ಕಾರಣಕ್ಕೆ ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿ ನೋಡಿದ್ದ. ಈ ವಿಚಾರದಲ್ಲಿ ಜಗಳವಾಗಿದೆ.
ಇದರಿಂದ ಕೆರಳಿದ ನಾಲ್ವರು ಆರೋಪಿಗಳು ಸೇರಿಕೊಂಡು ಮಾರಾಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಆರೋಪಿ ಶಹಬಾಜ್ ಎಂಬಾತನಿಗೂ ಗಾಯವಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಉದಯಗಿರಿ ಠಾಣೆಯ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.