

ಮೈಸೂರು: ಕೊಲೆ ಮಾಡಿ ಶವ ಹೂತಿಟ್ಟಿದ್ದ ಪ್ರಕರಣವನ್ನು ಭೇದಿಸಿರುವ ತಲಕಾಡು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಹನೂರು ತಾಲೂಕಿನ ಮನಗಹಳ್ಳಿಯ ರಾಜಮ್ಮ (42) ಕೊಲೆಯಾದ ಮಹಿಳೆ. ತಿ.ನರಸೀಪುರ ತಾಲೂಕಿನ ಅಲಗೂಡು ಗ್ರಾಮದ ಮಹೇಶ್ ಅಲಿಯಾಸ್ ದೇವರಗುಡ್ಡ (38), ಅಕ್ಕೂರು ದೊಡ್ಡಿ ಗ್ರಾಮದ ಸೋಮ (34), ಮಹದೇವ ಅಲಿಯಾಸ್ ಮಹದೇವ ನಾಯಕ(50), ಹೆಮ್ಮಿಗೆ ಗ್ರಾಮದ ಚೌಡಯ್ಯ (58) ಬಂಧಿತರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೆಂಕಟರಂಗ ನಾಯಕರ ಪತ್ನಿ ರಾಜಮ್ಮ ಜ.28ರಂದು ಮನೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಅವರ ಪತಿ ಹನೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಹನೂರು ಪೊಲೀಸರು ಪತ್ತೆ ಕಾರ್ಯಾಚರಣೆ ಆರಂಭಿಸಿದಾಗ ರಾಜಮ್ಮನಿಗೆ ಆರೋಪಿ ಮಹೇಶ್‌ನೊಂದಿಗೆ ಅನೈತಿಕ ಸಂಬಂಧವಿತ್ತು ಎಂಬುದು ತಿಳಿದು ಬಂದಿದೆ. ಕೊಲೆ ಮಾಡಿದ ಆರೋಪಿಗಳು ತಲಕಾಡು ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ವಾಸಿಗಳಾಗಿದ್ದರಿಂದ ಈ ಸಂಬಂಧ ತನಿಖೆ ಮುಂದುವರಿಸಿದ ತಲಕಾಡು ಪೊಲೀಸರು ರಾಜಮ್ಮನ ಕೊಲೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
ಮಹೇಶ್‌ನೊಂದಿಗೆ ರಾಜಮ್ಮ ಅನೈತಿಕ ಸಂಬಂಧ ಹೊಂದಿದ್ದಳು. ಇದೇ ಕಾರಣದಿಂದ ರಾಜಮ್ಮ ನೀನು ನನ್ನೊಂದಿಗೆ ಇರಬೇಕು ಎಂದು ಮಹೇಶ್‌ನನ್ನು ಒತ್ತಾಯಿಸುತ್ತಿದ್ದಳು. ಆದರೆ, ಮಹೇಶ್‌ನಿಗೆ ಸಂಸಾರವಿದ್ದ ಕಾರಣಕ್ಕೆ ರಾಜಮ್ಮಳ ಕೋರಿಕೆಯನ್ನು ತಿರಸ್ಕರಿಸಿದ್ದ. ಆದರೆ, ರಾಜಮ್ಮನ ಹಠದಿಂದ ಬೇಸರಗೊಂಡು ಕೊಲೆಗೆ ಸಂಚು ರೂಪಿಸಿದ್ದ.
ಜ.28ರಂದು ತಿ.ನರಸೀಪುರ ಅಕ್ಕೂರು ದೊಡ್ಡಿ ಗ್ರಾಮದ ಬಳಿ ಸೋಮ ನೋಡಿಕೊಳ್ಳುತ್ತಿದ್ದ ತೋಟದ ಮನೆಗೆ ಕರೆದುಕೊಂಡು ಬಂದು ಗುದ್ದಲಿಯಲ್ಲಿ ಹೊಡೆದು ರಾಜಮ್ಮನನ್ನು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಅಲ್ಲೆ ಬಿಟ್ಟು ಹೋಗಿದ್ದು, ಎರಡ್ಮೂರು ದಿನಗಳ ನಂತರ ಬಂದು ಸಾಕ್ಷೃ ನಾಶಪಡಿಸಲು ಶವವನ್ನು ತೋಟದಲ್ಲೇ ಹೂತಿಟ್ಟಿದ್ದಾರೆ. ಇದಕ್ಕೆ ಚೌಡಯ್ಯ ಮತ್ತು ಮಹದೇವ ಸಹಕಾರ ನೀಡಿದ್ದಾರೆ. ಮಹೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ವಿಷಯವನ್ನು ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ತಿಳಿಸಿದರು.
ಈತನ ಬಂಧನ ವಿಷಯ ತಿಳಿಯುತ್ತಿದ್ದಂತೆ ತಲಕಾಡಿನ ಮರಳಿನ ಪುಟ್ಟ ದ್ವೀಪದಲ್ಲಿ ಅವಿತು ಕುಳಿತ್ತಿದ್ದ ಸೋಮನನ್ನು ಸೆರೆಹಿಡಿದ ಪೊಲೀಸರು ನಂತರ ಚೌಡಯ್ಯ ಮತ್ತು ಮಹದೇವನನ್ನು ಬಂಧಿಸಿದ್ದಾರೆ. ಹೂತಿಟ್ಟ ಶವವನ್ನು ಹೊರತೆಗೆದು ಮೈಸೂರು ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ್ದ ಆಯುಧ(ಸಲಿಕೆ), ಮೊಬೈಲ್‌ಗಳು, ಮೃತರ ತಾಳಿ, ಕರಿಮಣಿ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಪತ್ತೆ ಕಾರ್ಯಾಚರಣೆಯಲ್ಲಿ ತಲಕಾಡು ಸಿಪಿಐ ಎಂ.ಆರ್.ಲವ, ಪಿಎಸ್‌ಐ ಬಸವರಾಜು, ಪ್ರೊಬೇಷನರಿ ಪಿಎಸ್‌ಐ ಹನುಮಂತ ಉಪ್ಪಾರ, ಎಎಸ್‌ಐಗಳಾದ ರಮೇಶ್, ಪಚ್ಚೇಗೌಡ, ಮುಖ್ಯ ಪೇದೆಗಳಾದ ಸತೀಶ್, ಪ್ರಭಾಕರ್, ಸತ್ಯನಾರಾಯಣ, ಪ್ರಕಾಶ್, ಸಿದ್ದರಾಜು, ಸಿಬ್ಬಂದಿ ವಸಂತಕುಮಾರ್, ವಿನೋದ್‌ಕುಮಾರ್, ವಿನಯ್‌ಕುಮಾರ್, ಮಂಜುನಾಥ್, ಗಿರೀಶ್, ದಯಾನಂದ, ಶಿವಸ್ವಾಮಿ, ಮಹೇಶ್, ಸಿ.ಎನ್.ಇಸ್ಮಾಯಿಲ್, ಸೋಮನಾಯ್ಕ, ಮಹದೇವು ಪಾಲ್ಗೊಂಡಿದ್ದರು.