

ಅರಸೀಕೆರೆ: ನಗರ ನಿವಾಸಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ನಗರಸಭೆ ಆಡಳಿತ ಶ್ರಮಿಸುತ್ತಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ಕಂತೇನಹಳ್ಳಿ, ಜಾಜೂರು ಹಾಗೂ ಹುಳಿಯಾರು ರಸ್ತೆಗೆ ಹೊಂದಿಕೊಂಡಂತೆ ನೂತನವಾಗಿ ಅಳವಡಿಸಲಾಗಿರುವ ಸ್ವಾಗತ ಫಲಕ ಹಾಗೂ ಗರುಡನಗಿರಿ ಮಾರ್ಗದ ಎಲ್ಇಡಿ ಬೀದಿ ದೀಪಗಳಿಗೆ ಹಸಿರು ನಿಶಾನೆ ತೋರಿ ಮಾತನಾಡಿದರು. ನಗರದ ಮಧ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಅಂದಾಜು 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುದ್ದೀಕರಣ ಸೇರಿದಂತೆ ಹಲವು ಸವಲತ್ತುಗಳನ್ನು ನಾಗರಿಕರಿಗೆ ಕಲ್ಪಿಸಲಾಗಿದೆ. ಇದೀಗ ಹೊಸದಾಗಿ ಸ್ವಾಗತ ಫಲಕ ಹಾಗೂ ಬೀದಿ ದೀಪಗಳನ್ನು ಅಳವಡಿಸಿ ನಗರದ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡಲಾಗಿದೆ. ಮಾಲೆಕಲ್ಲು ತಿರುಪತಿ ಜಾತ್ರೆ ನಿಮಿತ್ತ ತಾಲೂಕಿನ ಐತಿಹಾಸಿಕ, ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸುವ ಉದ್ದೇಶ ಈಡೇರಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ ಮಾತನಾಡಿ, 39 ಲಕ್ಷ ರೂ. ವೆಚ್ಚದಲ್ಲಿ ಕಂತೆನಹಳ್ಳಿ-ಜಾಜೂರು ಬಳಿ ಸ್ವಾಗತ ಫಲಕ ಹಾಗೂ ಗರುಡನಗಿರಿ ರಸ್ತೆಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅನುಕೂಲವಾಗಲಿದೆ ಎಂದರು.
ಪೌರಾಯುಕ್ತ ಕೃಷ್ಣಮೂರ್ತಿ, ನಗರಸಭೆ ಉಪಾಧ್ಯಕ್ಷ ಮನೋಹರ್, ಸ್ಥಳೀಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ಎಸ್.ಅರುಣ್ ಕುಮಾರ್, ನಗರಸಭೆ ಸದಸ್ಯರು ಹಾಗೂ ನಾಗರಿಕರು ಹಾಜರಿದ್ದರು.