

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಜಾಹೀರಾತು ನಾಮಲಕ, ನಗರ ಸೌಂದರ್ಯದ ಹೆಸರಿನಲ್ಲಿ ರಸ್ತೆ ಎರಡೂ ಬದಿಯಲ್ಲಿ ಹಸಿರು ಸಿರಿಯಿಂದ ಕಂಗೊಳಿಸುತ್ತಿದ್ದ ನೂರು ವರ್ಷದ ಹಳೇ ಮರಗಳ ರೆಂಬೆ-ಕೊಂಬೆ ಕತ್ತರಿಸಿ ಹಾಕಲು ಪಾಲಿಕೆ ಮುಂದಾಗಿದ್ದು, ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾನಗರದ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿ ವಿವಿಧ ಪ್ರಮುಖ ರಸ್ತೆಯ ಎರಡು ಬದಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ನಾಮಲಕ ಜನರ ಕಣ್ಣಿಗೆ ಸರಿಯಾಗಿ ಕಾಣುತ್ತಿಲ್ಲ. ಅಲ್ಲದೆ, ಹೊಸದಾಗಿ ನಾಮಲಕ ಅಳವಡಿಸಲು ಮರಗಳ ರೆಂಬೆ ಕೊಂಬೆಗಳು ಅಡ್ಡಿಯಾಗಿವೆ. ಅಲ್ಲದೆ, ನಗರ ಸೌಂದರ್ಯಿಕರಣಕ್ಕೆ ಕೆಲ ಮರಗಳು ಅಡ್ಡಿಯಾಗಿದ್ದು, ಅವುಗಳ ತೆರವಿಗೆ ಅವಕಾಶ ನೀಡಬೇಕು ಎಂದು ಗುತ್ತಿಗೆದಾರರು ಪಾಲಿಕೆಗೆ ವಿನಂತಿಸಿದ್ದಾರೆ. ಮತ್ತೊಂದೆಡೆ ಪಾಲಿಕೆ ಅಕಾರಿಗಳು ಗುತ್ತಿಗೆದಾರರ ಪ್ರಸ್ತಾವನೆ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸದೆ ಸಾಮಾನ್ಯ ಸಭೆಯಲ್ಲಿ ಮಂಡಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಆದಾಯದ ಚಿಂತೆ: 2008 ರಿಂದ 2025ರ ಅವಯಲ್ಲಿ ರಸ್ತೆ ಅಗಲೀಕರಣ, ಕಟ್ಟಡಗಳ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ನೂರಾರು ಮರಗಳನ್ನು ಕಟಾವು ಮಾಡಲಾಗಿದೆ. ಇದೀಗ ನಗರ ಸೌಂದರ್ಯ, ಜಾಹೀರಾತು ನಾಮಲಕ ಅಳವಡಿಕೆಗೆ ಅಡ್ಡಿಯಾಗುತ್ತಿವೆ ಎಂಬ ಕಾರಣಕ್ಕೆ ದೊಡ್ಡ ಮರದ ರೆಂಬೆ ಕೊಂಬೆಗಳನ್ನು ಕಡಿದು ಪರಿಸರಕ್ಕೆ ಧಕ್ಕೆ ಮಾಡುತ್ತಿರುವ ಕ್ರಮ ಸರಿಯಾಗಿಲ್ಲ. ಗುತ್ತಿಗೆದಾರರ ಒತ್ತಡಕ್ಕೆ ಪಾಲಿಕೆ ಆಡಳಿತ, ಅಕಾರಿಗಳು ಮಣಿದಿದ್ದಾರೆ. ಪರಿಸರ ಸಂರಕ್ಷಣೆಗಿಂತ ಪಾಲಿಕೆಗೆ ಆದಾಯವೇ ಮುಖ್ಯವಾಗಿದೆ.
ಜನರ ಆಕ್ರೋಶ: ಒಣಗಿ ಬೀಳುವ ಹಂತದಲ್ಲಿರುವ ಮರದ ಕೊಂಬೆ ಕತ್ತರಿಸುವುದು ತಪ್ಪಲ್ಲ. ಮಳೆ-ಗಾಳಿಗೆ ಕೆಲವು ಮರಗಳ ಕೊಂಬೆಗಳು ಬಿದ್ದು ಸಾವು ನೋವು ಸಂಭವಿಸಿರುವ ಹಿನ್ನೆಲೆ ಅಪಾಯ ತಂದೊಡ್ಡುತ್ತಿರುವ ಮರಗಳ ರೆಂಬೆಗಳನ್ನು ವೈಜ್ಞಾನಿಕವಾಗಿ ಕಟಾವು ಮಾಡುವುದು ನಿಯಮ. ಆದರೆ, ಕೇವಲ ಜಾಹೀರಾತು ಲಾಭಕ್ಕಾಗಿ ನೆರಳು ನೀಡುವ ಹಸಿ ಕೊಂಬೆಗಳನ್ನೇ ಕತ್ತರಿಸುತ್ತಿರುವುದು ಸರಿಯೇ? ಸರ್ಕಾರಿ ಕಚೇರಿ ಆವರಣ, ಸಾರ್ವಜನಿಕ ಸ್ಥಳಗಳಲ್ಲಿನ ಮರಗಳನ್ನು ರಾತ್ರೋರಾತ್ರಿ ಕಟಾವು ಮಾಡಲಾಗುತ್ತಿದೆ. ಪಾಲಿಕೆ, ಅರಣ್ಯ ಇಲಾಖೆಯು ಗಿಡ ನೆಟ್ಟು ಮರ ಬೆಳೆಸುವ ಬದಲು ಇದ್ದ ಮರಗಳನ್ನು ಕಟಾವು ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮ ವೃತ್ತದಲ್ಲಿರುವ ವಿಶ್ವನಾಥ ಶುಗರ್ ಕಾರಂಜಿ ಅಭಿವೃದ್ಧಿ ಪಡಿಸುವುದು ಹಾಗೂ ಇಲ್ಲಿಯೇ ಒಂದು ಜಾಹೀರಾತು ನಾಮಲಕ ಅಳವಡಿಸಲು ಆಲದ ರೆಂಬೆಗಳು ಅಡ್ಡಿಯಾಗಿವೆ. ಹೀಗಾಗಿ ಇವುಗಳ ಕಟಾವಿಗೆ ಅನುಮತಿ ನೀಡಬೇಕು. ಈ ಕೆಲಸಕ್ಕಾಗಿ 20 ಲಕ್ಷ ರೂ. ಖರ್ಚನ್ನು ಪಾಲಿಕೆ ಭರಿಸಬೇಕು ಎಂದು ಜಾಹೀರಾತು ಗುತ್ತಿಗೆದಾರ ಇದ್ರಿಸ್ ಅಹ್ಮದ್ ಎಚ್ ಉಸ್ತಾದ ಎಂಬುವರು ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಪಾಲಿಕೆ ಅಕಾರಿಗಳು ತಿಳಿಸಿದ್ದಾರೆ.
ಜಾಹೀರಾತು ನಾಮಲಕ ಅಳವಡಿಸಲು ಅಡ್ಡಿಯಾಗಿರುವ ಮರಗಳ ರೆಂಬೆ, ಕೊಂಬೆಗಳ ಕಟಾವು ಮಾಡುವ ಯಾವುದೇ ಪ್ರಸ್ತಾವನೆ ಬಂದಿಲ್ಲ. ಒಂದು ವೇಳೆ ಅಂತಹ ಪ್ರಸ್ತಾವನೆ ಬಂದರೆ ರದ್ದುಪಡಿಸಲಾಗುವುದು. | ಶುಭ ಬಿ. ಪಾಲಿಕೆ ಆಯುಕ್ತೆ