

ಅರಸೀಕೆರೆ: ನಗರದ ರೈಲ್ವೆ ನಿಲ್ದಾಣ ರಸ್ತೆಗೆ ಹೊಂದಿಕೊಂಡಂತಿರುವ ಹಳೇ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಸಂಗ್ರಹವಾಗಿದ್ದ ಕಸದ ರಾಶಿಯನ್ನು ನಗರಸಭೆ ಪೌರ ಕಾರ್ಮಿಕರು ಸೋಮವಾರ ತೆರವುಗೊಳಿಸಿದ್ದಾರೆ.
ಕೆಲ ದಿನಗಳಿಂದ ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯ ಸಂಗ್ರಹವಾಗಿತ್ತು. ಇದರಿಂದ ಜನರು ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ವಿಜಯವಾಣಿ ಪತ್ರಿಕೆ ‘ಅರಸೀಕೆರೆಯಲ್ಲಿ ಕಸದ ಕಿರಿಕಿರಿ’ ಶೀರ್ಷಿಕೆಯಡಿ ಸೋಮವಾರ ಸಮಗ್ರ ವರದಿ ಪ್ರಕಟಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ 11ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಶ್ವೇತಾ ರಮೇಶ್ ಅವರು ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ಜತೆ ಪತ್ರಿಕೆ ವರದಿ ಪ್ರಸ್ತಾಪಿಸಿ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕಸ ವಿಲೇವಾರಿ ಮಾಡುವಂತೆ ಗಮನ ಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ ನಗರಸಭೆ ಆಡಳಿತ ರಾಶಿ ರಾಶಿ ಕಸ ತೆರವು ಮಾಡಿದ್ದು, ಪ್ರಶಂಸೆ ವ್ಯಕ್ತವಾಗಿದೆ. ಹಳೇ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯ ವಿಲೇವಾರಿಯಿಂದ ರಸ್ತೆಯ ಇಕ್ಕೆಲಗಳಲ್ಲಿರುವ ಕೆಲ ಗೂಡಂಗಡಿ, ಹೋಟೆಲ್, ಬೇಕರಿ, ತಳ್ಳುವಗಾಡಿ ಆಹಾರ ಸೇವಿಸುವ ಗ್ರಾಹಕರು ಹಾಗೂ ವ್ಯಾಪಾರಿಗಳು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.