

ಶ್ರೀರಂಗಪಟ್ಟಣ: ಪಟ್ಟಣದ ವಿವಿಧ ರಸ್ತೆ ಬದಿಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸಂಗ್ರಹಗೊಂಡಿದ್ದ ಕಸದ ರಾಶಿಯನ್ನು ಪುರಸಭೆ ಸ್ವಚ್ಛಗೊಳಿಸಿದೆ.
ಪಟ್ಟಣದಲ್ಲಿ ಸೋಮವಾರ ಮುಂಜಾನೆಯಿಂದಲೇ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ರಂಗನಾಥನಗರದ 1ನೇ ಮತ್ತು 2ನೇ ವಾರ್ಡ್, 3ನೇ ವಾರ್ಡಿನ ಕುಂಬಾರಗೇರಿ, 4ವಾರ್ಡಿನ ಕಾಳಮ್ಮನ ಗುಡಿ, 7ನೇ ವಾರ್ಡಿನ ಪೂರ್ಣಯ್ಯ ಬೀದಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಸದ ರಾಶಿಗಳನ್ನು ಪೌರಕಾರ್ಮಿಕರು ತೆರವುಗೊಳಿಸಿದರು.
ಪಟ್ಟಣದಲ್ಲಿ ತಲೆದೋರಿದ್ದ ಕಸ-ತ್ಯಾಜ್ಯಗಳ ರಾಶಿ ಸಮಸ್ಯೆ ಕುರಿತು ವಿಜಯವಾಣಿ ಪತ್ರಿಕೆ ಅ.20ರಂದು ‘ಶ್ರೀರಂಗಪಟ್ಟಣಕ್ಕೆ ತ್ಯಾಜ್ಯವೇ ಮಾರಕ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಪುರಸಭೆ, ಸ್ವಚ್ಛಗೊಳಿಸಿದೆ. ತ್ಯಾಜ್ಯ ಸಂಗ್ರಹದಿಂದ ಪರಿಸರ ಮಾಲಿನ್ಯ ಹಾಗೂ ಅಶುಚಿತ್ವದಿಂದ ಸೊಳ್ಳೆ-ನೊಣಗಳ ಉತ್ಪತ್ತಿಗೊಂಡು ಅನಾರೋಗ್ಯ ಭೀತಿಯಲ್ಲಿದ್ದ ಪುರಜನರು, ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ ವಿಜಯವಾಣಿಗೆ ಧನ್ಯವಾದ ತಿಳಿಸಿದ್ದಾರೆ.