ಚಿಂದಿ ಆಯುವ ವೃದ್ಧೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಪುರಸಭೆ ಸಿಬ್ಬಂದಿ

18HNL1
Published on

ಹಾನಗಲ್ಲ: ಚಿಂದಿ ಆಯುವ ವೃದ್ಧೆಯ ಅಂತ್ಯ ಸಂಸ್ಕಾರವನ್ನು ಪುರಸಭೆ ಸಿಬ್ಬಂದಿ ಗೌರವಪೂರ್ವಕವಾಗಿ ಕೈಗೊಂಡು ಮಾನವೀಯತೆ ಮೆರೆದ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಎಪಿಎಂಸಿ ಕಚೇರಿ ಬಳಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಲಕ್ಷ್ಮೀ ವೆಂಕಟೇಶ ದಂಪತಿ, 12 ವರ್ಷಗಳ ಹಿಂದೆ ತುಮಕೂರ ಜಿಲ್ಲೆಯಿಂದ ವಲಸೆ ಬಂದು ಚಿಂದಿ ಆಯುವ ಮೂಲಕ ಬದುಕು ಸಾಗಿಸುತ್ತಿದ್ದರು. ವೃದ್ಧೆ ತೀವ್ರ ಅನಾರೋಗ್ಯದಿಂದ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಳು. ಮೃತಳ ಪತಿ ಪುರಸಭೆಗೆ ಮಾಹಿತಿ ನೀಡಿ ಶವದ ಅಂತ್ಯಸಂಸ್ಕಾರಕ್ಕೆ ಸಹಾಯ ಮಾಡುವಂತೆ ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಪುರಸಭೆ ವಾಹನದಲ್ಲಿ ಶವ ಕೊಂಡೊಯ್ದು ಕ್ರೀಡಾಂಗಣದ ಬಳಿ ಅಂತ್ಯಕ್ರಿಯೆ ನೆರವೇರಿಸಿದರು. ಪುರಸಭೆ ಸಿಬ್ಬಂದಿ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಪುರಸಭೆ ಸಿಬ್ಬಂದಿ ಅರುಣ ಕುಲಕರ್ಣಿ, ಮುತ್ಯಾಲಪ್ಪ ಹರಿಜನ, ಪ್ರವೀಣ ವಡ್ಡರ, ಸಂತೋಷ ಹರಿಜನ, ಮಲ್ಲೇಶಪ್ಪ ಹರಿಜನ, ಪ್ರಶಾಂತ ಕಟ್ಟಿಮನಿ, ಮೈಲಾರಪ್ಪ ಹರಿಜನ ಇತರರು ಅಂತ್ಯಕ್ರಿಯೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net